ADVERTISEMENT

ಮಳವಳ್ಳಿ: ದಲಿತ ಸಿಬ್ಬಂದಿ ಮೇಲೆ ಹಲ್ಲೆ; ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 13:17 IST
Last Updated 15 ಜುಲೈ 2023, 13:17 IST
ಮಳವಳ್ಳಿ ಪಟ್ಟಣದ ಎಂಡಿಸಿಸಿ ಬ್ಯಾಂಕ್ ಶಾಖೆಯ ದಲಿತ ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು
ಮಳವಳ್ಳಿ ಪಟ್ಟಣದ ಎಂಡಿಸಿಸಿ ಬ್ಯಾಂಕ್ ಶಾಖೆಯ ದಲಿತ ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು   

ಮಳವಳ್ಳಿ: ಪಟ್ಟಣದ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯಲ್ಲಿ ದಲಿತ ಸಮುದಾಯದ ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೊಳ್ಳೇಗಾಲ ರಸ್ತೆಯ ಡಿಸಿಸಿ ಬ್ಯಾಂಕ್ ಶಾಖೆ ಮುಂದೆ ಜಮಾಯಿಸಿದ ಪ್ರತಿಭಟನಕಾರರು, ‘ಶುಕ್ರವಾರ ಸಂಜೆ ಬ್ಯಾಂಕ್‌ನಲ್ಲಿ ವಿಚಾರವೊಂದರ ಚರ್ಚೆ ವೇಳೆ ದಲಿತ ಸಮುದಾಯಕ್ಕೆ ಸೇರಿದ ನಂದಕುಮಾರ್ ಎಂಬ ಸಿಬ್ಬಂದಿ ಮೇಲೆ ಶಾಖಾ ಉಪ ವ್ಯವಸ್ಥಾಪಕ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ಎಂ.ಆರ್.ಮಹೇಶ್ ಕುಮಾರ್ ಮಾತನಾಡಿ, ‘ದಲಿತ ಸಮುದಾಯದ ನೌಕರನಿಗೆ ಉಪ ವ್ಯವಸ್ಥಾಪಕ ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಾರೆ. ಇಂಥ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ವ್ಯವಸ್ಥಾಪಕರು ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಹಲ್ಲೆ ನಡೆಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಭೇಟಿ ನೀಡಿ, ‘ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವೆ. ಶುಕ್ರವಾರ ಸಂಜೆಯೇ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, 24 ಗಂಟೆಯೊಳಗೆ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೆ.ಸಿ.ಜೋಗಿಗೌಡ ಅವರು ಬ್ಯಾಂಕ್‌ಗೆ ಭೇಟಿ ನೀಡಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ವ್ಯವಸ್ಥಾಪಕಿ ವನಜಾಕ್ಷಿ ಅವರಿಗೆ ಸೂಚನೆ ನೀಡಿದರು.

ಬ್ಯಾಂಕ್ ನಿರ್ದೇಶಕ ಅಶ್ವಿನ್ ಕುಮಾರ್, ಮುಖಂಡ ಸಿ.ಮಾಧು, ಪುರಸಭೆ ಸದಸ್ಯ ಎಂ.ಆರ್.ರಾಜಶೇಖರ್, ಮುಖಂಡರಾದ ಕಿರಣ್ ಶಂಕರ್, ಯತೀಶ್, ಪ್ರೋ.ರಂಗಸ್ವಾಮಿ, ಮಹದೇವ ಪ್ರಸಾದ್, ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.