ADVERTISEMENT

ಮಂಡ್ಯ | ಪ್ರವಾಸಿಗರ ಮೋಜು; ಜೀವಕ್ಕೆ ಆಪತ್ತು

ಬಲಮುರಿ ಮತ್ತು ಮುತ್ತತ್ತಿ ಪ್ರವಾಸಿ ತಾಣ: 6 ವರ್ಷಗಳಲ್ಲಿ 62 ಪ್ರವಾಸಿಗರ ಸಾವು

ಸಿದ್ದು ಆರ್.ಜಿ.ಹಳ್ಳಿ
Published 26 ಜುಲೈ 2024, 4:31 IST
Last Updated 26 ಜುಲೈ 2024, 4:31 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಪ್ರವಾಸಿ ತಾಣದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ ನೀರಿನಲ್ಲಿ ಆಟವಾಡುತ್ತಿರುವ ಪ್ರವಾಸಿಗರು (ಸಂಗ್ರಹ ಚಿತ್ರ)
ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಪ್ರವಾಸಿ ತಾಣದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ ನೀರಿನಲ್ಲಿ ಆಟವಾಡುತ್ತಿರುವ ಪ್ರವಾಸಿಗರು (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ‘ಬಲಮುರಿ’ ಮತ್ತು ಮಳವಳ್ಳಿ ತಾಲ್ಲೂಕಿನ ‘ಮುತ್ತತ್ತಿ’ ಪ್ರವಾಸಿ ತಾಣಗಳು ‘ಸಾವಿನ ವಲಯ’ಗಳಾಗಿ ಅಪಾಯದ ಕರೆಗಂಟೆ ಬಾರಿಸುತ್ತಿವೆ. 

ಈ ಎರಡೂ ತಾಣಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ ಆರು ವರ್ಷಗಳಲ್ಲಿ ಬಲಮುರಿಯಲ್ಲಿ 32 ಮಂದಿ ಮತ್ತು ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ 30 ಮಂದಿ ಅಸುನೀಗಿದ್ದಾರೆ. 

ಹಚ್ಚ ಹಸಿರಿನ ಪ್ರಕೃತಿ ಮಡಿಲಿನಲ್ಲಿರುವ ಬಲಮುರಿ ಮತ್ತು ಮುತ್ತತ್ತಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿ ಜುಳುಜುಳು ಹರಿಯುವ ಕಾವೇರಿ ನದಿಯಲ್ಲಿ ಮಿಂದೇಳಲು ಜನರು ಮುಗಿಬೀಳುತ್ತಾರೆ. ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಮೋಜು, ಮಸ್ತಿ ಮಾಡಲು ಬರುವ ಯುವಕರು ಸುರಕ್ಷತೆಯನ್ನು ಮರೆತು ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. 

ADVERTISEMENT

ಬಲಮುರಿಯ ಲಾಳಾಕಾರದ ಒಡ್ಡಿನ ಮೇಲೆ ಓಡಾಡುವಾಗ, ಕುಳಿತು ಮೋಜು ಮಾಡುವಾಗ, ಮದ್ಯದ ಅಮಲಿನಲ್ಲಿ ತೇಲಾಡುವಾಗ ಆಯತಪ್ಪಿ ಬಿದ್ದು, ನದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಿದ್ದಾರೆ. ಒಡ್ಡಿನ ಮೇಲಿಂದ ಹಿನ್ನೀರಿಗೆ ಧುಮುಕುವುದು, ಈಜಾಡುವ ವೇಳೆ ನದಿಯ ಒಳಭಾಗದಲ್ಲಿರುವ ಕಲ್ಲು, ಬಂಡೆಗಳಿಗೆ ತಲೆ ಬಡಿದು ಕೆಲವರು ಜೀವತೆತ್ತಿದ್ದಾರೆ. ಇನ್ನು ಕೆಲವರು ಈಜು ಬಾರದೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. 

83 ಪ್ರವಾಸಿಗರು ನೀರುಪಾಲು: ಬಲಮುರಿಯ ಕಾವೇರಿ ನದಿ ನೀರಿನಲ್ಲಿ 2008ರಿಂದ 2017ರವರೆಗೆ ಅಂದರೆ 10 ವರ್ಷಗಳಲ್ಲಿ ಬರೋಬ್ಬರಿ 83 ಪ್ರವಾಸಿಗರು ನೀರುಪಾಲಾಗಿದ್ದಾರೆ. ಇವರಲ್ಲಿ 16 ರಿಂದ 28 ವರ್ಷದೊಳಗಿನ ಯುವಕರೇ ಹೆಚ್ಚು. ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು, ಟೆಕ್ಕಿಗಳು ಜೀವ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಲಾರ ಜಿಲ್ಲೆ ಕೆಜಿಎಫ್‌ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಅವರ 26 ವರ್ಷದ ಮಗ ಮೂವರು ಸ್ನೇಹಿತರ ಜತೆ ಇಲ್ಲಿಗೆ ವಿಹಾರಕ್ಕೆ ಬಂದಿದ್ದಾಗ, ಈಜಲು ನದಿಗೆ ಇಳಿದಾಗ ಸುಳಿಗೆ ಸಿಲುಕಿ ಮೃತಪಟ್ಟಿದ್ದ. ಈ ವರ್ಷ ಮೇ 7ರಂದು ಮೈಸೂರು ತಾಲ್ಲೂಕಿನ ಸಾಲುಂಡಿ ಗ್ರಾಮದ 16 ವರ್ಷದ ಬಾಲಕ ಸಾವನ್ನಪ್ಪಿದ್ದ.

ಸಿಬ್ಬಂದಿ ನಿಯೋಜನೆ: ‘ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯ ಮುತ್ತತ್ತಿ ರಸ್ತೆಯ ಗಾಣಾಳು ಜಲಪಾತದ ಬಳಿ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ 50 ಸಾವಿರ ಕ್ಯುಸೆಕ್‌ವರೆಗೂ ನೀರನ್ನು ನದಿಗೆ ಬಿಡುತ್ತಿರುವ ಕಾರಣ, ಕಾವೇರಿ ನದಿ ದಂಡೆಯಲ್ಲಿ ಬರುವ ಪ್ರವಾಸಿ ತಾಣಗಳಿಗೆ ಪೊಲೀಸ್‌ ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ, ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ರಭಸವಾಗಿ ಹರಿಯುವ ಕಾವೇರಿ ನದಿಯಲ್ಲಿ ಈಜುವುದು ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗರು ಸಾವಿಗೀಡಾಗುತ್ತಿದ್ದಾರೆ. ಮೋಜು–ಮಸ್ತಿ ಹೆಸರಿನಲ್ಲಿ ಜೀವದ ಜೊತೆ ಚೆಲ್ಲಾಟವಾಡಬಾರದು
ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಂಡ್ಯ

ಪ್ರವಾಸಿಗರ ಪ್ರವೇಶ ನಿರ್ಬಂಧಕ್ಕೆ ಪತ್ರ

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಸಮೀಪದ ಬಲಮುರಿ ಪ್ರಕೃತಿ ತಾಣದಲ್ಲಿ ಸಾವುಗಳ ಸರಣಿ ಮುಂದುವರಿದಿದ್ದು ಇಲ್ಲಿನ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೆ.ಆರ್‌.ಎಸ್‌. ಠಾಣೆ ಪೊಲೀಸರು ಈಚೆಗೆ ಪತ್ರ ಬರೆದಿದ್ದಾರೆ. ‘ಇದೇ ವರ್ಷ ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ 7 ಮಂದಿ ಕಾವೇರಿ ನದಿಯಲ್ಲಿ ಜಲ ಸಮಾಧಿಯಾಗಿದ್ದಾರೆ. ಬಲಮುರಿ ತಾಣದ ಒಡ್ಡಿನ ಹಿನ್ನೀರಿಗೆ ಇಳಿಯುವವರು ನದಿಯಲ್ಲಿ ಮುಳುಗಿ ಸಾಯುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಹಾಗಾಗಿ ನಿರ್ದಿಷ್ಟ ಸ್ಥಳದತ್ತ ಪ್ರವಾಸಿರು ತೆರಳದಂತೆ ಬೇಲಿ ನಿರ್ಮಿಸುವ ಅಗತ್ಯವಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.  ‘ಬಲಮುರಿ ಸಮೀಪದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕೆಲವರು ಮದ್ಯ ಸೇವಿಸಿ ನೀರಿಗೆ ಇಳಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದುವರೆಗೆ ಪೊಲೀಸರು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ. 

ಮುತ್ತತ್ತಿಯಲ್ಲಿ ಶವಗಳ ಯಾತ್ರೆ

ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ತಾಣವಾಗಿದೆ. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿದ್ದು ಪ್ರವಾಸಿಗರ ಮನ ಸೆಳೆಯುತ್ತದೆ.  ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ವಿಸ್ತಾರವಾಗಿ ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಮತ್ತು ಈಜಲು ಹೋಗುತ್ತಾರೆ. ಈಜು ಬಾರದವರು ನದಿಯಲ್ಲಿ ಮುಳುಗಿ ಮೃತಪಟ್ಟರೆ ಮತ್ತೆ ಕೆಲವರು ಆಳವಾದ ನೀರಿಗೆ ಇಳಿದು ನದಿಯ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಜೀವತೆತ್ತಿದ್ದಾರೆ.  ಇದೇ ವರ್ಷ ಫೆ.5ರಂದು ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ಸುಳಿಗೆ ಸಿಲುಕಿ ರಾಮನಗರ ತಾಲ್ಲೂಕಿನ ಯುವಕನೊಬ್ಬ ಮೃತಪಟ್ಟಿದ್ದ. ಮಾರ್ಚ್‌ 26ರಂದು ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ಮೈಸೂರು ಮೂಲದ ತಂದೆ ಮಗ ಸೇರಿ ನಾಲ್ವರು ಮುಳುಗಿ ಮೃತಪಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.