ADVERTISEMENT

ಮಂಡ್ಯ | ಮರಗಳಿಗೆ ಕೊಡಲಿ; ಬಾನಾಡಿಗಳು ತಬ್ಬಲಿ

ನೂರಡಿ ರಸ್ತೆಯಲ್ಲಿ ಬೋಳಾದ ಮರಗಳು; ಪರಿಸರವಾದಿ, ಸಾರ್ವಜನಿಕರ ಆಕ್ರೋಶ

ಸಿದ್ದು ಆರ್.ಜಿ.ಹಳ್ಳಿ
Published 27 ಅಕ್ಟೋಬರ್ 2024, 2:10 IST
Last Updated 27 ಅಕ್ಟೋಬರ್ 2024, 2:10 IST
ಮಂಡ್ಯ ನಗರದ ಬನ್ನೂರು ರಸ್ತೆ (ನೂರಡಿ ರಸ್ತೆ) ಬದಿಯಲ್ಲಿದ್ದ ಮರಗಳ ದೊಡ್ಡ ದೊಡ್ಡ ಕೊಂಬೆಗಳನ್ನು ಕತ್ತರಿಸಿ ಹಾಕಿದ್ದು, ಒಂದು ಬದಿಯ ರಸ್ತೆ ಸಂಚಾರ ಬಂದ್‌ ಆಗಿರುವ ದೃಶ್ಯ  –ಪ್ರಜಾವಾಣಿ ಚಿತ್ರ 
ಮಂಡ್ಯ ನಗರದ ಬನ್ನೂರು ರಸ್ತೆ (ನೂರಡಿ ರಸ್ತೆ) ಬದಿಯಲ್ಲಿದ್ದ ಮರಗಳ ದೊಡ್ಡ ದೊಡ್ಡ ಕೊಂಬೆಗಳನ್ನು ಕತ್ತರಿಸಿ ಹಾಕಿದ್ದು, ಒಂದು ಬದಿಯ ರಸ್ತೆ ಸಂಚಾರ ಬಂದ್‌ ಆಗಿರುವ ದೃಶ್ಯ  –ಪ್ರಜಾವಾಣಿ ಚಿತ್ರ    

ಮಂಡ್ಯ: ನಗರದ ಬನ್ನೂರು ರಸ್ತೆಯ (ನೂರಡಿ ರಸ್ತೆ) ಎರಡೂ ಬದಿಯಲ್ಲಿ ಹಸಿರ ಸಿರಿಯಿಂದ ಕಂಗೊಳಿಸುತ್ತಿದ್ದ ಮರಗಳ ದೊಡ್ಡ– ದೊಡ್ಡ ರೆಂಬೆ ಕೊಂಬೆಗಳನ್ನು ಟೆಂಡರ್‌ದಾರರು ಮನಸೋ ಇಚ್ಛೆ ಕತ್ತರಿಸಿ ಹಾಕಿದ ಪರಿಣಾಮ, ನೂರಾರು ಹಕ್ಕಿ–ಪಕ್ಷಿಗಳು ಆಶ್ರಯ ಕಳೆದುಕೊಂಡು, ತಬ್ಬಲಿಗಳಾಗಿವೆ. 

ಬೆಳಿಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ಓಡಾಡುವ ವಾಯುವಿಹಾರಿಗಳಿಗೆ ಪಕ್ಷಿಗಳ ಕಲರವ ಮುದ ನೀಡುತ್ತಿತ್ತು. ಹಸಿರ ಚಿಗುರು, ಹೂವು, ಕಾಯಿಗಳನ್ನು ತಿನ್ನಲು ನೂರಾರು ಸಂಖ್ಯೆಯಲ್ಲಿ ತರಹೇವಾರಿ ಹಕ್ಕಿಗಳು ಇಲ್ಲಿಗೆ ಬರುತ್ತಿದ್ದವು. ಬೆಚ್ಚನೆಯ ಗೂಡು ಕಟ್ಟಿ, ಮರಿಗಳಿಗೆ ಕಾವು ಕೊಟ್ಟು, ಗುಟುಕು ನೀಡುತ್ತಿದ್ದ ತಾಯಿಗಳು ಆಸರೆ ಕಳೆದುಕೊಂಡು ಅನಾಥವಾಗಿವೆ. 

ಎಂಥ ಬಿರು ಬಿಸಿಲಿನಲ್ಲೂ ರಸ್ತೆಯಲ್ಲಿ ಓಡಾಡುವ ಜನರ ನೆತ್ತಿಗೆ ತಂಪಾದ ನೆರಳು ಮತ್ತು ಶುದ್ಧ ಗಾಳಿ ನೀಡುತ್ತಿದ್ದ ಮರಗಳ ದೊಡ್ಡ ದೊಡ್ಡ ಕೊಂಬೆಗಳನ್ನು ಅವೈಜ್ಞಾನಿಕವಾಗಿ ತುಂಡರಿಸಲಾಗಿದೆ. ಗರಗಸ, ಕೊಡಲಿಯ ಏಟುಗಳು ಮರಗಳಿಗೆ ಮೈತುಂಬ ಗಾಯ ಮಾಡಿವೆ. ಹಸಿರ ಚೆಲುವನ್ನು ಕಳೆದುಕೊಂಡ ಬೋಳು ಮರಗಳು ಬಿಕ್ಕುತ್ತಿರುವಂತೆ ಭಾಸವಾಗುತ್ತದೆ. 

ADVERTISEMENT

50 ಕೊಂಬೆಗಳಿಗೆ ಕೊಡಲಿ:

ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಿಸಿ, ಗಿಡ ಮರಗಳ ಸಂರಕ್ಷಣೆಯ ಜಾಗೃತಿ ಮೂಡಿಸಿದ್ದ ಅರಣ್ಯ ಇಲಾಖೆ ಮರು ತಿಂಗಳೇ ಅಂದರೆ ಜುಲೈನಲ್ಲಿ ಬನ್ನೂರು ರಸ್ತೆಯ ಬದಿಯಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಲು ಟೆಂಡರ್‌ ನೀಡಿತ್ತು. ಟೆಂಡರ್‌ದಾರರ ಕಡೆಯ ‘ಮರ ಕಟುಕರ’ ಗರಗಸದ ಬಾಯಿಗೆ ಒಣಗಿದ ಕೊಂಬೆಗಳ ಜೊತೆ 50ಕ್ಕೂ ಹೆಚ್ಚು ಹಸಿ ಮತ್ತು ದಪ್ಪನೆಯ ಕೊಂಬೆಗಳು ಧರಾಶಾಯಿಯಾದವು.

ಈಗ ಮತ್ತೆ ಗರಗಸ, ಯಂತ್ರಗಳು ನೂರಡಿ ರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದರಿಂದ ಹತ್ತಾರು ಕೊಂಬೆಗಳು ಉರುಳಿ ಬಿದ್ದಿವೆ. ಈ ಸದ್ದಿಗೆ ಎಚ್ಚೆತ್ತ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆ ಮುಖಂಡರು ಮರಗಳ ಹನನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಟೆಂಡರ್‌ದಾರರ ದುರಾಸೆ ಬಗ್ಗೆ ನಗರದ ನಾಗರಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಅಪಾಯಕಾರಿ ರೆಂಬೆಗಳ ಕಟಾವಿಗೆ ಟೆಂಡರ್‌:

ನಗರದಲ್ಲಿ ಮಳೆ-ಗಾಳಿಗೆ ಕೆಲವು ಮರಗಳ ಕೊಂಬೆಗಳು ಬಿದ್ದು ಸಾವು- ನೋವು ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾಯ ತಂದೊಡ್ಡುತ್ತಿರುವ ಮರಗಳ ರೆಂಬೆಗಳ ಕಟಾವಿಗೆ ಅರಣ್ಯ ಇಲಾಖೆಯು ಟೆಂಡರ್‌ ನೀಡಿದೆ. ನಗರದ ಜಿಲ್ಲಾಸ್ಪತ್ರೆ ರಸ್ತೆ, ನೂರಡಿ ರಸ್ತೆ, ಜೈಲು ಖಾನೆ ಬಳಿ ಸೇರಿದಂತೆ ಅಪಾಯ ಉಂಟು ಮಾಡುತ್ತಿದ್ದ ಮರಗಳ ಕೊಂಬೆಗಳನ್ನು ತೆಗೆಯಲು ಹರಾಜು ಮಾಡಲಾಗಿದೆ. ಅಪಾಯ ಉಂಟು ಮಾಡುತ್ತಿದ್ದ ರಂಬೆ ಕೊಂಬೆಗಳನ್ನು ಕಟಾವು ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಆಗುವ ಅಪಾಯ ತಪ್ಪಿಸಬಹುದು’ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ವಾದ. 

‘ನಗರ ಪ್ರದೇಶಗಳಲ್ಲಿ ಗಿಡ ನೆಟ್ಟು ಮರ ಬೆಳಸುವುದು ಕಷ್ಟದ ಕೆಲಸ. ಇರುವ ಮರಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ನೂರಡಿ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಉಂಟಾಗುತ್ತಿದ್ದ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮರಗಳ ಪಾತ್ರ ಪ್ರಮುಖವಾಗಿತ್ತು. ಸಂಬಂಧಪಟ್ಟವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಮಂಡ್ಯ ನಗರದ ಬನ್ನೂರು ರಸ್ತೆ (ನೂರಡಿ ರಸ್ತೆ) ಬದಿಯಲ್ಲಿದ್ದ ಮರಗಳ ಕೊಂಬೆಗಳನ್ನು ಕತ್ತರಿಸಿ ಹಾಕಿರುವುದರಿಂದ ‘ಹಸಿರು ಹೊದಿಕೆ’ ಮಾಯವಾಗಿದೆ
ನಗರಸಭೆ ಅರಣ್ಯ ಇಲಾಖೆ ಸೆಸ್ಕ್‌ ಇಲಾಖೆಗಳ ಸಮನ್ವಯದ ಕೊರತೆಯಿಂದ ಇಂತಹ ಅನಾಹುತ ಸಂಭವಿಸಿದೆ. ಮರ ಕಡಿದಿರುವುದನ್ನು ನೋಡಿದರೆ ಜೀವಸೆಲೆಯೇ ಉಳಿದಿಲ್ಲ
ಮಂಗಲ ಯೋಗೇಶ್‌, ಪರಿಸರ ರೂರಲ್‌ ಡೆವಲಪ್‌ಮೆಂಟ್‌ ಸಂಸ್ಥೆ
ಹಲವು ವರ್ಷಗಳಿಂದ ಇದೇ ಮರಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ ನನಗೆ ಆಘಾತವಾಗಿದೆ. ಕೈ–ಕಾಲು ರುಂಡಗಳಿರದ ದೇಹಗಳಂತೆ ಬೋಳು ಮರಗಳು ಭಾಸವಾಗುತ್ತಿವೆ
ಅರವಿಂದ ಪ್ರಭು, ಮುಖ್ಯಸ್ಥ ಚಿತ್ರಕೂಟ
ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಿ ಮರಗಳ ಕೊಂಬೆಗಳನ್ನು ಕತ್ತಿರಿಸಿದ್ದರೆ ಕ್ರಮ ತೆಗೆದುಕೊಳ್ಳಲು ಆರ್‌ಎಫ್‌ಒ ಅವರಿಗೆ ಸೂಚನೆ ನೀಡಿದ್ದೇನೆ
ರಾಜು, ಡಿಸಿಎಫ್‌ ಮಂಡ್ಯ

ಹಸಿ ಕೊಂಬೆಗಳನ್ನು ಕತ್ತರಿಸಿದ್ದು ಸರಿಯೇ?

ಒಣಗಿ ಬೀಳುವ ಹಂತದಲ್ಲಿರುವ ಕೊಂಬೆಗಳನ್ನು ಕತ್ತರಿಸುವುದು ತಪ್ಪಲ್ಲ. ಆದರೆ ಪಾದಚಾರಿಗಳಿಗೆ ನೆರಳು ನೀಡುವ ಹಸಿ ಕೊಂಬೆಗಳನ್ನೇ ಕತ್ತರಿಸುವುದು ಸರಿಯೇ?. ರಸ್ತೆಗಳ ಕಡೆ ಚಾಚಿಕೊಂಡಿದ್ದ ಕೊಂಬೆಗಳನ್ನು ಅವೈಜ್ಞಾನಿಕವಾಗಿ ಕಡಿಯಲಾಗಿದೆ. ಇದರಿಂದ ಮರಗಳು ಸಮತೋಲನ ಕಳೆದುಕೊಂಡು ಗಾಳಿ–ಮಳೆಗೆ ಬುಡಸಮೇತ ಉರುಳಿಬೀಳುವ ಅಪಾಯ ತಪ್ಪಿದ್ದಲ್ಲ  ಎಂದು ಪರಿಸರ ಪ್ರೇಮಿ ಆಲಕೆರೆ ಸಿ.ಸಿದ್ದರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಲ್‌ ಕಾಣ್ತಿಲ್ಲ ಅಂತ ಕಡಿಯೋದು ನಾಚಿಕೆಗೇಡು

‘ನೂರಡಿ ರಸ್ತೆಯಲ್ಲಿ ಇರುವ ಮಾಲ್‌ ಜನರ ಕಣ್ಣಿಗೆ ಸರಿಯಾಗಿ ಕಾಣುತ್ತಿಲ್ಲ ಅಂತ ದೊಡ್ಡ ಮರದ ರೆಂಬೆ ಕೊಂಬೆಗಳನ್ನು ಕಡಿಯೋದು ನಾಚಿಕೆಗೇಡಿನ ಸಂಗತಿ. ಪರಿಸರ ರಕ್ಷಣೆಯಲ್ಲಿಯೂ ಬೌದ್ಧಿಕ ದಾರಿದ್ರ್ಯ ಕಾಡುತ್ತಿದೆ. ಅರಣ್ಯ ಇಲಾಖೆಯೊಂದಿಗೆ ಟೆಂಡರ್‌ದಾರ ಶಾಮೀಲಾಗಿದ್ದಾನೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಪರಿಸರ ಪ್ರೇಮಿ ಹರವು ದೇವೇಗೌಡ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.