ಮಂಡ್ಯ: ರಾಜ್ಯದಾದ್ಯಂತ ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ 8,552 ಮಂದಿ, ಮೂತ್ರಪಿಂಡ, ಯಕೃತ್, ಹೃದಯ, ಶ್ವಾಸಕೋಶ ಸೇರಿ ವಿವಿಧ ಅಂಗಾಂಗಗಳಿಗೆ ಕಾಯುತ್ತಿದ್ದಾರೆ.
ಮಾನವ ಅಂಗಗಳು ಮತ್ತು ಅಂಗಾಂಶಗಳ ಕೊರತೆಯು ದಿನೇ ದಿನೇ ಹೆಚ್ಚುತ್ತಿದ್ದು, ಕಾರ್ನಿಯಾ, ಹೃದಯ ಕವಾಟ, ಚರ್ಮ ಸೇರಿದಂತೆ ವಿವಿಧ ಅಂಗಾಂಶಗಳಿಗಾಗಿಯೂ ರೋಗಿಗಳು ಪರದಾಡುತ್ತಿದ್ದಾರೆ. ಸೂಕ್ತ ಸಮಯಕ್ಕೆ ಅಂಗಾಂಗಗಳು ದೊರಕದೇ ಅನೇಕರು ಸಾವಿಗೀಡಾಗುತ್ತಿದ್ದಾರೆ.
‘ಒಬ್ಬ ದಾನಿ 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿಯ ಅಂಗಾಂಶಗಳಾದ ಚರ್ಮ, ಮೂಳೆ, ಅಸ್ಥಿರಜ್ಜು, ಹೃದಯ ಕವಾಟಗಳು ಮತ್ತು ಕಣ್ಣು ದಾನ ಮಾಡಿ 50ಕ್ಕೂ ಹೆಚ್ಚು ಜನರ ಜೀವನದಲ್ಲಿ ಬೆಳಕು ತರಬಹುದು’ ಎನ್ನುತ್ತಾರೆ ವೈದ್ಯರು.
ಅಂಗಾಂಗಗಳ ಕೊರತೆ ನೀಗಿಸಲು ರಾಜ್ಯ ಸರ್ಕಾರ ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ 26 ‘ಕಸಿ ಮಾಡದ ಮಾನವ ಅಂಗಗಳ ಮರುಪಡೆಯುವಿಕೆ ಕೇಂದ್ರ‘ಗಳನ್ನು (NTHORC) ಸ್ಥಾಪಿಸಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಅಡಿಯಲ್ಲಿ ಬಡರೋಗಿಗಳಿಗೆ ಉಚಿತ ಅಂಗಾಂಗ ಕಸಿ ಸೌಲಭ್ಯ ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆಯಡಿ, ‘ರಾಜ್ಯ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ‘ಯು (SOTTO) ಅಂಗಾಂಗ ದಾನವನ್ನು ಉತ್ತೇಜಿಸುತ್ತಾ, ಮಿದುಳು ನಿಷ್ಕ್ರಿಯಗೊಂಡ ದಾನಿಯಿಂದ ಪಡೆದ ಅಂಗಾಂಗಗಳ ಕಸಿಯನ್ನು ಸಂಯೋಜಿಸುತ್ತಿದೆ.
ಅಂಗಾಂಗ ದಾನ ಮಾಡಲು ಆರೋಗ್ಯ ಶಿಬಿರಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿ ಮೊಬೈಲ್‌ನಲ್ಲೇ ನೋಂದಣಿ ಮಾಡಿಸಿದೆವು. ಇದರ ಪರಿಣಾಮ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ –ಡಾ.ರಮೇಶಬಾಬು ಡಿಎಚ್‌ಒ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.