ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ‘ಬೈಕರ್‌’ಗಳಿಗೆ ಒಂಚೂರು ಜಾಗ ಕೊಡಿ

ದಶಪಥದಲ್ಲಿ ದ್ವಿಚಕ್ರ–ತ್ರಿಚಕ್ರ ವಾಹನಗಳಿಗೆ ನಿಷೇಧ ಚಿಂತನೆ, ಸಾರ್ವಜನಿಕ ವಲಯದಲ್ಲಿ ಆಕ್ಷೇಪ

ಎಂ.ಎನ್.ಯೋಗೇಶ್‌
Published 12 ಜನವರಿ 2023, 19:30 IST
Last Updated 12 ಜನವರಿ 2023, 19:30 IST
ಸಾಮಾಜಿಕ ಜಾಗೃತಿಗಾಗಿ ಬೈಕ್‌ ಜಾಥಾ ನಡೆಸುವ ‘ಶಿ ಫಾರ್‌ ಸೊಸೈಟಿ’ ಮಹಿಳಾ ಸಂಘಟನೆಯ ಸದಸ್ಯೆಯರು (ಸಂಗ್ರಹ ಚಿತ್ರ)
ಸಾಮಾಜಿಕ ಜಾಗೃತಿಗಾಗಿ ಬೈಕ್‌ ಜಾಥಾ ನಡೆಸುವ ‘ಶಿ ಫಾರ್‌ ಸೊಸೈಟಿ’ ಮಹಿಳಾ ಸಂಘಟನೆಯ ಸದಸ್ಯೆಯರು (ಸಂಗ್ರಹ ಚಿತ್ರ)   

ಮಂಡ್ಯ: ಬೆಂಗಳೂರು– ಮೈಸೂರು ಹತ್ತು ಪಥದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ನಿಷೇಧಿಸುವ ಚಿಂತನೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎರಡೂ ನಗರಗಳ ನಡುವೆ ನಿಯಮಿತವಾಗಿ ಬೈಕ್‌ ಯಾತ್ರೆ ನಡೆಸುವ ‘ಬೈಕರ್‌’ಗಳಿಗಾದರೂ ಒಂದಷ್ಟು ಜಾಗ ನೀಡಬೇಕು ಎಂದು ವಿವಿಧ ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ.

ದಶಪಥ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ವಿವಿಧ ಸಣ್ಣಪುಟ್ಟ ವಾಹನಗಳ ಸಂಚಾರ ನಿಷೇಧಿಸುವ ಚರ್ಚೆಗಳು ಗರಿಗೆದರಿವೆ. ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ 6 ರಸ್ತೆಗಳ ಮುಖ್ಯ ಹೆದ್ದಾರಿಯಲ್ಲಿ ಬೈಕ್‌, ಆಟೊ, ಟ್ರ್ಯಾಕ್ಟರ್‌ ಸಂಚಾರ ನಿಷೇಧಿಸುವ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದೆ. ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪರ– ವಿರೋಧ ಚರ್ಚೆಗಳು ಆರಂಭವಾಗಿವೆ.

ಹೆದ್ದಾಯಲ್ಲಿ ವಾಹನಗಳು ಅತೀ ವೇಗವಾಗಿ ಚಲಿಸಲಿದ್ದು ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಬೈಕ್‌, ಆಟೊ, ಟ್ರ್ಯಾಕ್ಟರ್‌ ನಿಷೇಧಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾಮಾನ್ಯರ ಬೈಕ್‌ಗಳನ್ನು ಹೊರಗಿಟ್ಟು ಶ್ರೀಮಂತರ ಕಾರುಗಳಿಗೆ ಮಾತ್ರ ಹೆದ್ದಾರಿ ಸಂಚಾರದ ಅವಕಾಶ ನೀಡುವುದು ಅಮಾನವೀಯ ನಡೆ ಎಂದು ಕೆಲವರು ಆರೋಪಿಸಿದ್ದಾರೆ.

ADVERTISEMENT

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೃತ್ತಿಪರ ಬೈಕರ್‌ ಸಂಘಟನೆಗಳ ಸದಸ್ಯರು ನಿಯಮಿತವಾಗಿ ಸಂಚಾರ ನಡೆಸುತ್ತಾರೆ. ಸಾಮಾಜಿಕ ಸ್ಪಂದನೆ, ಜಾಗೃತಿ, ದೇಶ ಪರ್ಯಟನೆ ಮುಂತಾದ ಉದ್ದೇಶದಿಂದ ಹಲವರು ಬೈಕ್‌ಗಳಲ್ಲೇ ಓಡಾಡುತ್ತಾರೆ. ವಾರಾಂತ್ಯದಲ್ಲಿ ಸಾವಿರಾರು ಪವಾಸಿಗರು ಐಷಾರಾಮಿ ಬೈಕ್‌ಗಳಲ್ಲಿ ಓಡಾಡುತ್ತಾರೆ. ಬೆಂಗಳೂರಿನಿಂದ ಮಡಿಕೇರಿವರೆಗೂ ಬೈಕರ್‌ಗಳ ಓಡಾಟವಿದೆ. ದಶಪಥದಲ್ಲಿ ಬೈಕ್‌ ಸಂಚಾರ ನಿಷೇಧಿಸುವ ಚಿಂತನೆಗೆ ಬೈಕರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ನಾವು ಸಾಹಸಕ್ಕಾಗಿ, ಖುಷಿಗಾಗಿ ಬೈಕ್‌ ಓಡಿಸುವುದಿಲ್ಲ, ಸೈನಿಕರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ, ಸೈನಿಕರ ಕುಟುಂಬ ಸದಸ್ಯರು ವಾಸಿಸುವ ಪ್ರದೇಶಗಳಲ್ಲಿ ಸೌಲಭ್ಯ ನೀಡುವುದಕ್ಕಾಗಿ ಬೈಕ್‌ ರ‍್ಯಾಲಿ ಮೂಲಕ ತೆರಳುತ್ತೇವೆ. ಮೈಸೂರಿನಲ್ಲಿ ಹಲವು ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ನಾವು ಅತ್ಯಂತ ಶಿಸ್ತಿನಿಂದ, ಟ್ರಾಫಿಕ್‌ ನಿಯಮ ಪಾಲನೆ ಮಾಡುತ್ತಾ ಬೈಕ್ ಓಡಿಸುತ್ತೇವೆ. ಮೈಸೂರು– ಬೆಂಗಳೂರು ದಶಪಥದಲ್ಲಿ ನಮ್ಮನ್ನು ತಡೆಯುವುದು ಎಷ್ಟು ಸರಿ’ ಎಂದು ಬೆಂಗಳೂರಿನ ‘ಶಿ ಫಾರ್‌ ಸೊಸೈಟಿ’ ಮಹಿಳಾ ಬೈಕರ್‌ಗಳ ಸಂಘದ ಸಂಸ್ಥಾಪಕಿ ಹರ್ಷಿಣಿ ಹೇಳಿದರು.

‘ದೂರ ಪ್ರಯಾಣ ಮಾಡುವ ಬಹುತೇಕ ಬೈಕ್‌ ಸವಾರರು ಹೆಚ್ಚು ಸಿಸಿ ಬೈಕ್‌ಗಳನ್ನೇ ಬಳಸುತ್ತಾರೆ, ಅವರು ಅಂತಹ ಬೈಕ್‌ ಚಾಲನೆಯ ಪರಿಣತಿ ಹೊಂದಿರುತ್ತಾರೆ. ಹೆದ್ದಾರಿಗಾಗಿಯೇ ಅಂತಹ ಬೈಕ್‌ಗಳನ್ನು ರೂಪಿಸಲಾಗಿದೆ. ಆ ಬೈಕ್‌ಗಳು ಕೂಡ ಸರ್ವೀಸ್‌ ರಸ್ತೆಯಲ್ಲೇ ಓಡಾಡುವಂತೆ ಸೀಮಿತಗೊಳಿಸುವುದು ಅವೈಜ್ಞಾನಿಕ’ ಎಂದು ಮೈಸೂರಿನ ಬೈಕ್‌ ಸವಾರ ಸ್ಫೀಫನ್‌ ರಾಜು ಹೇಳಿದರು.

***

ವಾಹನಗಳು ವೇಗವಾಗಿ ಸಂಚರಿಸುವಾಗ ಬೈಕ್‌ ಸವಾರರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯೇ ಹೆಚ್ಚು. ಸುರಕ್ಷತೆಗಾಗಿ ಕೆಲ ವಾಹನಗಳ ಸಂಚಾರ ನಿಷೇಧಿಸುವ ಚಿಂತನೆ ನಡೆದಿದೆ.
–ಶ್ರೀಧರ್‌, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ

***

ಜನರ ಪ್ರಾಣದ ಜೊತೆ ಚೆಲ್ಲಾಟ
‘ಇನ್ನೂ ಹೆದ್ದಾರಿ ಉದ್ಘಾಟನೆಯಾಗಿಲ್ಲ, ವಾಹನಗಳ ಓಡಾಟ ಪರಿಪೂರ್ಣವಾಗಿ ಆರಂಭವಾಗಿಲ್ಲ. ಮೊದಲೇ ಬೈಕ್‌, ಆಟೊ ಸವಾರರಿಗೆ ಸುರಕ್ಷತೆ ಇಲ್ಲ ಎನ್ನುವುದು ಅವರ ಜೀವದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ಬೈಕ್‌ ಸವಾರರೂ ಸುರಕ್ಷಿತವಾಗಿ ಚಲಿಸುವ ವ್ಯವಸ್ಥೆಯನ್ನು ಹೆದ್ದಾರಿ ಪ್ರಾಧಿಕಾರ ಕಲ್ಪಿಸಬೇಕು’ ಎಂದು ಮಂಡ್ಯದ ಕೃಷ್ಣಕುಮಾರ್‌ ಒತ್ತಾಯಿಸಿದರು.

***

ಬೈಕ್‌ಗಳನ್ನು ಹೊಗಿಡುವುದು ಬೇಡ
‘ಎಲ್ಲರೂ ಕಾರುಗಳಲ್ಲಿ ಓಡಾಡಲು ಸಾಧ್ಯವಿಲ್ಲ, ಅವಶ್ಯಕತೆಗಳಿಗಾಗಿ ಓಡಾಡಲು ಹೆಚ್ಚಿನ ಜನರು ಬೈಕ್‌, ಸ್ಕೂಟರ್‌ಗಳನ್ನೇ ಅವಲಂಬಿಸಿದ್ದಾರೆ. ಸಾವಿರಾರು ಕೋಟಿ ಖರ್ಚು ಮಾಡಿ ಹೆದ್ದಾರಿ ನಿರ್ಮಿಸಿ ಬೈಕ್‌ಗಳನ್ನು ಹೊರಗಿಡುವುದು ಸರಿಯಲ್ಲ. ಸುರಕ್ಷೆಗಾಗಿ ಬೈಕ್‌ ಸವಾರರಿಗೆ ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು’ ಎಂದು ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 63 ಸಾವಿರ ಕಿ.ಮೀ ಸಂಚಾರ ಮಾಡಿರುವ ಮೈಸೂರಿನ ಕೃಷ್ಣಕುಮಾರ್‌ ಹೇಳಿದರು.

‘ನಾನು ಸಾಕಷ್ಟ ಹೆದ್ದಾರಿಗಳನ್ನು ನೋಡಿದ್ದೇನೆ, ಸುರಕ್ಷಿತವಾಗಿ ಸ್ಕೂಟರ್, ಬೈಕ್‌ ಓಡಿಸಲು ಸಾಧ್ಯವಿದೆ. ಕಾರು, ಬಸ್‌ಗಳಿಗೆ ತೊಂದರೆಯಾಗದ ರೀತಿಯಲ್ಲಿ ಚಾಲನೆ ಮಾಡಬಹುದು. ನಿರ್ಲಕ್ಷ್ಯ ಮಾಡುವವರ ಮೇಲೆ ನಿಗಾ ವಹಿಸಿ ಬೈಕ್‌ ಸವಾರರಿಗೂ ದಶಪಥದಲ್ಲಿ ಅವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.