ADVERTISEMENT

ಮಂಡ್ಯ | ಹಳ್ಳಕ್ಕೆ ಬಿದ್ದ ಬಸ್‌: ಚಾಲಕ ಸೇರಿ 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 9:39 IST
Last Updated 29 ಜೂನ್ 2024, 9:39 IST
   

ಮಂಡ್ಯ: ಸಾರಿಗೆ ಸಂಸ್ಥೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು– ಮೈಸೂರು ಹೆದ್ದಾರಿಯ ಸರ್ವಿಸ್‌ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿರುವ ಘಟನೆ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗೇಟ್‌ ಬಳಿ ಶನಿವಾರ ನಡೆದಿದೆ. 

ಘಟನೆಯಲ್ಲಿ ಚಾಲಕ ಶೇಖರ್‌ ಮತ್ತು ನಿರ್ವಾಹಕ ರವಿಚಂದ್ರ, ಪ್ರಯಾಣಿಕರಾದ ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಸೇರಿದಂತೆ 8 ಮಂದಿಗೆ ಗಾಯಗಳಾಗಿವೆ. ಚಾಲಕ ಶೇಖರ್‌ಗೆ ಕಾಲು ಮೂಳೆ ಮುರಿದಿದೆ ಎನ್ನಲಾಗಿದೆ. 

ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅತಿ ವೇಗವಾಗಿ ಬಂದ ಬಸ್‌ ಹೆದ್ದಾರಿಯ ಡಿವೈಡರ್‌ ಅನ್ನು ಮುರಿದುಕೊಂಡು, ಸರ್ವಿಸ್‌ ರಸ್ತೆಗೆ ನುಗ್ಗಿತು. ಸರ್ವಿಸ್‌ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಅಂಚಿಗೆ ಬಡಿದು, ನಂತರ ರಸ್ತೆಬದಿಯಲ್ಲಿದ್ದ ಟೀ ಅಂಗಡಿ ಮುಂಭಾಗ ನಿಂತಿದ್ದ ಬೈಕ್‌ಗಳಿಗೆ ಗುದ್ದಿ, ಹಳ್ಳಕ್ಕೆ ನುಗ್ಗಿದೆ. ಬಸ್‌ ನುಗ್ಗಿದ ರಭಸಕ್ಕೆ ಒಂದು ಬೈಕ್‌ ಬಸ್‌ ಅಡಿ ಸಿಲುಕಿಕೊಂಡು ಅದು ಕೂಡ ಹಳ್ಳಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  

ADVERTISEMENT

ಮಂಡ್ಯ ನಗರ ಮಿಮ್ಸ್‌ಗೆ ಗ್ರಾಮಸ್ಥರ ಸಹಕಾರದಿಂದ ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಕಳುಹಿಸಲಾಗಿದೆ. ಈ ಎಲ್ಲ ಘಟನೆ ಪಕ್ಕದಲ್ಲಿದ್ದ ಕಾರದ ಪುಡಿ ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಷಯ ತಿಳಿದ ತಕ್ಷಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.