ADVERTISEMENT

ಇನ್ನೆರಡು ವರ್ಷದಲ್ಲಿ ಭದ್ರಾ ಯೋಜನೆ ಪೂರ್ಣ: ಸಂಸದ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:30 IST
Last Updated 19 ಜೂನ್ 2024, 14:30 IST
ಚಿತ್ರದುರ್ಗದ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಅವರನ್ನು ಅಭಿನಂದಿಸಲಾಯಿತು
ಚಿತ್ರದುರ್ಗದ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಅವರನ್ನು ಅಭಿನಂದಿಸಲಾಯಿತು   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ನಾನು ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಇನ್ನೆರಡು ವರ್ಷಗಳಲ್ಲಿ ಯೋಜನಾ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಸ್ಕೌಟ್ಸ್‌ ಭವನದಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶಗಳಿವೆ. 40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೃಹತ್‌ ನೀರಾವರಿ, 10 ಲಕ್ಷ ಹೆಕ್ಟೇರ್‌ನಲ್ಲಿ ಸಣ್ಣನೀರಾವರಿ, 16 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೊಳವೆಬಾವಿ ಆಧಾರಿತ ಕೃಷಿ ಮಾಡಲು ಅವಕಾಶಗಳಿವೆ. ಆದರೆ ಇದುವರೆಗೆ 30 ಲಕ್ಷ ಹೆಕ್ಟೇರ್‌ ಮಾತ್ರ ನೀರಾವರಿಗೆ ಒಳಪಟ್ಟಿದೆ, ಅದೇ ರೀತಿ ಸಣ್ಣ ನೀರಾವರಿಯ 10 ಲಕ್ಷ ಹೆಕ್ಚೇರ್ ನಲ್ಲಿ ಏಳು ಲಕ್ಷ ಮಾತ್ರ ಸಾಧ್ಯವಾಗಿದ್ದು ಇನ್ನೂ ಮೂರು ಲಕ್ಷ ಹೆಕ್ಚೇರ್ ಬಾಕಿ ಇದೆ’ ಎಂದರು.

ADVERTISEMENT

‘ದೇಶದಲ್ಲಿ ಎರಡು ಜಿಲ್ಲೆಗಳು ಮಾತ್ರ ಕಳೆದ 350 ವರ್ಷಗಳಿಂದ ಭೀಕರ ಬರಗಾಲ ಎದುರಿಸಿದ್ದವು. ಒಂದು ರಾಜಸ್ತಾನದಲ್ಲಿದ್ದರೆ ಮತ್ತೊಂದು ಅವಿಭಜಿತ ವಿಜಯಪುರ ಜಿಲ್ಲೆಯಾಗಿತ್ತು. ಆದರೆ ಆಲಮಟ್ಟಿ ಜಲಾಶಯ ನಿರ್ಮಾಣದಿಂದಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಈಗ ಬರದ ಪಟ್ಟಿಯಿಂದ ಹೊರ ಬಂದಿವೆ. ದೇಶದಲ್ಲಿಯೇ ಬರದ ಪರಿಸ್ಥಿತಿ ಎದುರಿಸುವ ಜಿಲ್ಲೆಗಳಲ್ಲಿ ಚಿತ್ರದುರ್ಗ 2ನೇ ಸ್ಥಾನದಲ್ಲಿದೆ’ ಎಂದರು. 

‘ನೀರಾವರಿ ಮಾತ್ರ ಎಲ್ಲ ವರ್ಗ, ಸಮುದಾಯದ ಬದುಕನ್ನು ಹಸನಾಗಿಸಬಲ್ಲದು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಬಾಗಲಕೋಟೆ ಜಿಲ್ಲೆ ಜನ ನಿರಂತರ 40 ವರ್ಷ ಹೋರಾಟ ಮಾಡಿ ಯಶ ಕಂಡಿದ್ದಾರೆ. ಆಲಮಟ್ಟಿ ಜಲಾಶಯದಿಂದ 22 ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡಿಸಬಹುದಾಗಿದ್ದು, ಏಷ್ಯಾದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಜಲಾಶಯ ನಿರ್ಮಾಣಕ್ಕಾಗಿ 1.32 ಲಕ್ಷ ಹೆಕ್ಚೇರ್ ಭೂಮಿ ಮುಳುಗಡೆಯಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಚಿತ್ರದುರ್ಗದಿಂದ ಗೆದ್ದಿದ್ದೇನೆ. ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿಸಲು ನಾನೇ ಖುದ್ದು ಕಡತಗಳನ್ನು ಬಗಲಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರದ ಮುಂದೆ ಓಡಾಡಿದ್ದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದೆ. 2023-24ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ ₹ 5,300 ಕೋಟಿ ಅನುದಾನ ಕಾಯ್ದಿರಿಸಿದ್ದು ಅದನ್ನು ತರುವ ಪ್ರಯತ್ನ ಮಾಡುತ್ತೇನೆ. ತುಮಕೂರಿನಿಂದ ಗೆದ್ದಿರುವ ಸೋಮಣ್ಣ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದು, ಅವರೊಟ್ಟಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತೇನೆ’ ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ದೊಡ್ಡಸಿದ್ದವ್ವನಹಳ್ಳಿ ಸುಧಾ, ಜಗಳೂರು ಯಾದವರೆಡ್ಡಿ, ಹಿರೇ ಕಬ್ಬಿಗೆರೆ ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಜಿ.ಬಿ.ಶೇಖರ್, ಸಿಪಿಐ ಜಿಲ್ಲಾ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಸುರೇಶ್ ಬಾಬು, ಸಮಿತಿ ಸಂಚಾಲಕ ಜಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

ಬಾಂಡ್‌ ಬಿಡುಗಡೆ ಮಾಡಲಿ

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ‘ಆಲಮಟ್ಟಿ ಜಲಾಶಯ ನಿರ್ಮಾಣ ಮಾಡುವಾಗ ರಾಜ್ಯ ಸರ್ಕಾರ ಕೃಷ್ಣ ಜಲಭಾಗ್ಯ ನಿಗಮದ ಮೂಲಕ ಬಾಂಡ್ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡಿತ್ತು. ಭದ್ರಾ ಮೇಲ್ಡಂಡೆಗೆ ಅನುದಾನದ ಕೊರತೆಯಾದರೆ ಬಾಂಡ್ ಮೂಲಕ ಹಣ ಸಂಗ್ರಹಿಸಲಿ. ಜಿಲ್ಲೆಯ ಉದ್ಯಮಿಗಳು ಉದ್ಯೋಗಿಗಳು ವ್ಯಾಪಾರಸ್ಥರು ಕೊಂಡುಕೊಳ್ಳುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.