ಮಂಡ್ಯ: ‘ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಿದ್ದಂತೆ. ಅವರ ಜನಾಂಗದ ಉಳಿವಿಗಾಗಿ ಹೋರಾಡಿ ಮಡಿದ ಧೀಮಂತ ನಾಯಕ. ಅವರ ದಿಟ್ಟತನವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಧರ್ತಿ ಆಬಾ ಭಗವಾನ್ ಬಿರ್ಸಾಮುಂಡಾರವರ 150ನೇ ಜನ್ಮ ಜಯಂತಿ ಅಂಗವಾಗಿ ‘ಜನ ಜಾತಿಯ ಗೌರವ್ ದಿವಸ’ ಸಮಾರಂಭ ಹಾಗೂ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
‘ಬಿರ್ಸಾ ಮುಂಡಾ ಅವರ ಜಯಂತಿಯನ್ನು ಪ್ರತಿ ವರ್ಷ ನ.15ರಂದು ಆಚರಿಸಲಾಗುತ್ತದೆ. ಇವರನ್ನು ಭಾರತೀಯ ಇತಿಹಾಸದಲ್ಲಿ ಮಹಾನ್ ವೀರ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮಾಜದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು’ ಎಂದು ಹೇಳಿದರು.
‘ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾ ಮುಂಡಾರವರು ಬುಡಕಟ್ಟು ಜನಾಂಗಕ್ಕೆ ನೀಡಿದ ಕೊಡುಗೆ, ಹೋರಾಟ ಮತ್ತು ತ್ಯಾಗವನ್ನು ಗೌರವಿಸುವುದು ಈ ಜಯಂತಿಯ ಉದ್ದೇಶವಾಗಿದೆ’ ಎಂದು ತಿಳಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಇವರು 1875ರ ನವೆಂಬರ್ 15ರಂದು ಜಾರ್ಖಂಡ್ ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಅವರ ಹುಟ್ಟಿನ ಬಗ್ಗೆ ತಿಳಿಸಿದರು.
‘ಬಿರ್ಸಾ ಅವರ ಮುಖ್ಯ ಉದ್ದೇಶವೇ ಆದಿವಾಸಿಗಳ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದಾಗಿತ್ತು. ತಮ್ಮ 25ನೇ ಕಿರಿಯ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು’ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಸದಸ್ಯ ಶಿವಲಿಂಗು, ಭಾರತ ಆಡಳಿತ ಸೇವೆಯ ವೃತ್ತಿಪರ ಅಧಿಕಾರಿಗಳು ಇತರರು ಹಾಜರಿದ್ದರು.
‘ಸ್ವಾಭಿಮಾನ ಮೂಡಿಸಿದ ಹೋರಾಟ’
ನಗರಸಭೆ ಅಧ್ಯಕ್ಷ ಪ್ರಕಾಶ್ ಮಾತನಾಡಿ ‘ಬುಡಕಟ್ಟು ಸಮಾಜದ ಹೋರಾಟ ಸ್ವಾಭಿಮಾನ ಮತ್ತು ಅವರ ಹಕ್ಕುಗಳ ರಕ್ಷಣೆಯ ಸಂಕೇತವೆಂದು ಈ ದಿನವನ್ನು ಪರಿಗಣಿಸಲಾಗಿದೆ. ಇವರು ಪ್ರಾರಂಭಿಸಿದ ಹೋರಾಟವು ಬುಡಕಟ್ಟು ಜನರಲ್ಲಿ ಸ್ವಾಭಿಮಾನ ಮತ್ತು ಏಕತೆಯ ಭಾವನೆಯನ್ನು ಮೂಡಿಸಿತ್ತು. ಈ ದಿವಸವು ಬ್ರಿಟಿಷರ ಆಡಳಿತದ ವಿರುದ್ಧ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸುವ ದಿನವಾಗಿದೆ’ ಎಂದು ಹೇಳಿದರು. ಜಯಂತಿ ಅಂಗವಾಗಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ತದನಂತರ ಬುಡಕಟ್ಟು ಜನಾಂಗದವರು ಅವರ ಸಮುದಾಯದ ನೃತ್ಯ ಪ್ರದರ್ಶನವನ್ನು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.