ADVERTISEMENT

ಶ್ರೀರಂಗಪಟ್ಟಣ: ಪ್ರವಾಸ ಯೋಜನೆಗೆ ನೀಲನಕ್ಷೆ

ಶ್ರೀರಂಗಪಟ್ಟಣ: ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:25 IST
Last Updated 21 ಜೂನ್ 2024, 5:25 IST
ಶ್ರೀರಂಗಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಪ್ರವಾಸೋದ್ಯ ಇಲಾಖೆ ಉಪನಿರ್ದೇಶಕ ಎಚ್‌.ಬಿ. ರಾಘವೇಂದ್ರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಶ್ರೀರಂಗಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಪ್ರವಾಸೋದ್ಯ ಇಲಾಖೆ ಉಪನಿರ್ದೇಶಕ ಎಚ್‌.ಬಿ. ರಾಘವೇಂದ್ರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಶ್ರೀರಂಗಪಟ್ಟಣ: ‘ಪ್ರವಾಸೋದ್ಯಮ ಹಾಗೂ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ‘ಶ್ರೀರಂಗಪಟ್ಟಣ ಪ್ರವಾಸ ಒಂದು ದಿನ’ ಹೆಸರಿನ ಯೋಜನೆ ರೂಪಿಸಲು ನೀಲನಕ್ಷೆ ತಯಾರಿಸಲಾಗುತ್ತಿದೆ’ ಎಂದು ಶಾಸಕ ಹಾಗೂ ಸೆಸ್ಕ್‌ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಆನೆಕೋಟೆ ದ್ವಾರ, ಕಂದಕ ಮತ್ತು ಕಾವೇರಿ ನದಿ ಸೋಪಾನಕಟ್ಟೆ ಸ್ಥಳಕ್ಕೆ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಇತರ ಅಧಿಕಾರಿಗಳ ಜತೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

‘ತಾಲ್ಲೂಕಿನ ಕರಿಘಟ್ಟದಿಂದ ಪ್ರವಾಸ ಆರಂಭಿಸಿ ಕಾವೇರಿ ಸಂಗಮ, ಗುಂಬಸ್‌, ನಿಮಿಷಾಂಬಾ ದೇವಾಲಯ, ಟಿಪ್ಪು ಬೇಸಿಗೆ ಅರಮನೆ, ಶ್ರೀರಂಗನಾಥಸ್ವಾಮಿ ದೇವಾಲಯ, ರಂಗನತಿಟ್ಟು ಪಕ್ಷಿಧಾಮ, ಕೆಆರ್‌ಎಸ್‌ ಬೃಂದಾವನ ತಾಣಗಳನ್ನು ಒಳಗೊಂಡಂತೆ ಒಂದು ದಿನದ ಪ್ರವಾಸಿ ಸರ್ಕ್ಯೂಟ್‌ ರೂಪಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

‘ಮೊದಲ ಹಂತದಲ್ಲಿ, ಆನೆಕೋಟೆ ದ್ವಾರದ ಬಳಿ ಇರುವ ಕಂದಕದಲ್ಲಿ ದೋಣಿ ವಿಹಾರ ಆರಂಭಿಸಲು ಉದ್ದೇಶಿಸಲಾಗಿದೆ. ಆನೆಕೋಟೆ ದ್ವಾರದ ಪುನರುಜ್ಜೀವನ ಮತ್ತು ಈ ಸ್ಮಾರಕದ ಆಸುಪಾಸಿನಲ್ಲಿ ಉದ್ಯಾನ ನಿರ್ಮಿಸಲಾಗುವುದು. ಕಾವೇರಿ ನದಿ ಸೋಪಾನಕಟ್ಟೆಯ ಶಿಥಿಲ ಭಾಗಕ್ಕೆ ಕಾಯಕಲ್ಪ ನೀಡಲಾಗುತ್ತದೆ. ಪಟ್ಟಣದಲ್ಲಿ 2014ರಲ್ಲಿ ಆರಂಭವಾದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಬಗ್ಗೆ ಮತ್ತಷ್ಟು ಪ್ರಚಾರ ನೀಡುವ ಮೂಲಕ ಪಟ್ಟಣ ಮತ್ತು ಆಸುಪಾಸಿನ ಪ್ರವಾಸಿ ತಾಣಗಳತ್ತ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಮಾತನಾಡಿ, ‘ಶ್ರೀರಂಗಪಟ್ಟಣ ಪ್ರವಾಸ ಒಂದು ದಿನ’ ಯೋಜನೆಗೆ ಅಗತ್ಯವಾದ ಅನುದಾನ ಕೋರಿ ವಿಸ್ತೃತ ವರದಿ ಸಿದ್ಧಪಡಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಅನುದಾನದ ಲಭ್ಯತೆ ಆಧರಿಸಿ ಸ್ಮಾರಕಗಳ ಪುನರುಜ್ಜೀವನ ಮತ್ತು ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ’ ಎಂದರು.

‘ಕೋಟೆ ಮತ್ತು ಬುರುಜುಗಳ ಮೇಲೆ ಅಪಾರ ಪ್ರಮಾಣದ ಗಿಡ ಗಂಟಿಗಳು ಬೆಳೆದಿವೆ. ಪಟ್ಟಣದ ಸುತ್ತ 5,500 ಮೀಟರ್‌ ಉದ್ದದಷ್ಟು ಕೋಟೆ ಇದ್ದು ಎಲ್ಲವನ್ನೂ ಏಕಕಾಲದಲ್ಲಿ ಸ್ವಚ್ಛಗೊಳಿಸುವುದು ಕಷ್ಟ ಸಾಧ್ಯ. ಸದ್ಯಕ್ಕೆ ಕೋಟೆ, ಕಂದಕ, ಮಂಟಪಗಳ ರಕ್ಷಣೆಗೆ ಕ್ರಮ ವಹಿಸಲಾಗುತ್ತದೆ. ಮಳೆಗಾಲದಲ್ಲಿ ಕೋಟೆ ಕುಸಿಯದಂತೆ ಇಳಿಜಾರು ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಬಿ. ರಾಘವೇಂದ್ರ ಮಾತನಾಡಿ, ಪಟ್ಟಣಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದರೆ ಸ್ಥಳೀಯವಾಗಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ದಿಸೆಯಲ್ಲಿ ಪ್ರವಾಸಿ ತಾಣಗಳ ಬಳಿ ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲಸೌಕರ್ಯ ಕಲ್ಪಿಸಲಾಗುತ್ತದೆ’ ಎಂದರು. ಪ್ರವಾಸಿ ಅಧಿಕಾರಿ ಕಿರಣ್‌ ಹಾಗೂ ಸ್ಥಳೀಯ ಮುಖಂಡರು ಜತೆಗಿದ್ದರು.

ಶ್ರೀರಂಗಪಟ್ಟಣದ ಆನೆಕೋಟೆ ದ್ವಾರ ಸ್ಮಾರಕದ ಬಳಿ ಕೋಟೆ ಕಂದಕ ದ್ವಾರ ಮತ್ತು ಉದ್ಯಾನ ಅಭಿವೃದ್ಧಿ ಕುರಿತು ಶಾಸಕ ಹಾಗೂ ಸೆಸ್ಕ್‌ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಪ್ರವಾಸೋದ್ಯ ಇಲಾಖೆ ಉಪನಿರ್ದೇಶಕ ಎಚ್‌.ಬಿ. ರಾಘವೇಂದ್ರ ಗುರುವಾರ ಚರ್ಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.