ನಾಗಮಂಗಲ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯದಂತೆ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಜರುಗಿತು.
ತಾಲ್ಲೂಕಿನ ದೇವಲಾಪುರ ಹೋಬಳಿಯ ಸಾಲಾದ್ರಿ ಕ್ಷೇತ್ರ ಕೋಟೆ ಬೆಟ್ಟದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಜಾತ್ರೆಯು ವಿವಿಧ ಕಾರ್ಯಕ್ರಮ, ಬ್ರಹ್ಮ ರಥೋತ್ಸವ ದೊಂದಿಗೆ ಮುಕ್ತಾಯ ವಾಯಿತು.
ಶನಿವಾರ ಬೆಳಿಗ್ಗೆಯಿಂದಲೇ ಬ್ರಹ್ಮರಥೋತ್ಸವದ ಅಂಗವಾಗಿ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿರುವ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಮಾಡಲಾಗಿತ್ತು. ಮುಂಜಾನೆಯಿಂದಲೇ ತಾಲ್ಲೂಕಿನ ವಿವಿಧೆಡೆಯ ಭಕ್ತರು ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮುಜರಾಯಿ ಇಲಾಖೆಯಿಂದ ಬಂದಿದ್ದ ದೇವರ ಒಡವೆಗಳನ್ನು ವೆಂಕಟರಮಣ ಸ್ವಾಮಿ ದೇವರಿಗೆ ಧರಿಸುವ ಜೊತೆಗೆ ಮಧ್ಯಾಹ್ನದ ವೇಳೆಗೆ ಸಿಂಗಾರ ಮಾಡಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನಿರಿಸಿ ಕೋಟೆಬೆಟ್ಟ ಗ್ರಾಮದ ರಥದ ಬೀದಿಗಳಲ್ಲಿ ಸಾವಿರಾರು ಭಕ್ತರು ರಥ ಎಳೆದರು.
ಭಕ್ತರು ರಥಕ್ಕೆ ಬಾಳೆಹಣ್ಣು, ಜವನ ಎಸೆದು ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಹರಕೆ ಮಾಡಿಕೊಂಡರು. ಗ್ರಾಮದ ಪ್ರತಿ ಮನೆಯಲ್ಲೂ ಬ್ರಹ್ಮ ರಥೋತ್ಸವದ ಅಂಗವಾಗಿ ತೇರು ಒಪ್ಪತ್ತು ಎಂಬ ವಿಶೇಷ ಆಚರಣೆ ಮಾಡಿದ್ದು, ಸಿಹಿ ತಿನಿಸು ಸೇರಿದಂತೆ ಸಿಹಿ ಊಟವನ್ನು ಮಾಡಿ ದೇವರಿಗೆ ಎಡೆ ಇಡಲಾಗಿತ್ತು.
ಸ್ಥಳೀಯ ಭಕ್ತರು ಜಾತ್ರೆಯ ಎಲ್ಲ ಭಾಗಗಳಲ್ಲೂ ಅನ್ನದಾನ, ಪಾನಕ ಮತ್ತು ನೀರು ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.
ತಾಲ್ಲೂಕು ಆಡಳಿತದ ವತಿಯಿಂದ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಪೊಲೀಸ್ ಇಲಾಖೆಯ ವತಿಯಿಂದ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.