ಮಳವಳ್ಳಿ: ಕಳೆದ ಮೂರು ದಿನದ ಹಿಂದೆ ಅಟುವನಹಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು, ಸಾಹಳ್ಳಿ ಗ್ರಾಮದ ಸಿದ್ದರಾಜು (37) ತಲೆಗೆ ತೀವ್ರ ಪೆಟ್ಟು ಬಿದ್ದು, ಮಿದುಳು ನಿಷ್ಕ್ರಿಯಗೊಂಡಿದೆ.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ನೇತೃತ್ವದಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಸ್ನೇಹಿತರು ಹಾಗೂ ವೈದ್ಯರ ಸಲಹೆಯ ಮೇರೆಗೆ ಕುಟುಂಬ ಸದಸ್ಯರು ಸಾವಿನ ನೋವಿನಲ್ಲೂ ಮಾನವೀಯತೆಯಿಂದ ಅಂಗಾಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದರಿಂದ ಸಿದ್ದರಾಜು ಅವರನ್ನು ಮೈಸೂರಿಗೆ ಕರೆದುಕೊಂಡು ಹೋದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೋಮವಾರ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದು ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಅವರ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
‘ಶಾಸಕನಾಗಿ ಅವರ ಕುಟುಂಬಕ್ಕೆ ನೆರವಾಗುವ ಪ್ರಯತ್ನ ನಡೆಸಲಾಗುವುದು. ವಾಸ್ತವ ಮತ್ತು ಸಾಂದರ್ಭಿಕತೆಯನ್ನು ಅರ್ಥ ಮಾಡಿಕೊಂಡು ತೀರ್ಮಾನ ತೆಗೆದುಕೊಂಡರೆ ಹಲವಾರು ಜೀವಗಳನ್ನು ಉಳಿಸಬಹುದು. ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು ಸೇರಿದಂತೆ ಕೆಲವು ಅಂಗಗಳು ಮತ್ತೊಬ್ಬರಿಗೆ ನೆರವಾಗಲಿದೆ’ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಮುಖಂಡರಾದ ಆರ್.ಎನ್.ವಿಶ್ವಾಸ್, ಸಿ.ಮಾಧು, ದೊಡ್ಡಯ್ಯ, ಮುಟ್ಟನಹಳ್ಳಿ ಅಂಬರೀಶ್, ರೋಹಿತ್(ದೀಪು), ಸಾಹಳ್ಳಿ ಶಶಿ, ಸಾಂಗ್ಯ ಕೆಂಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.