ಶ್ರೀರಂಗಪಟ್ಟಣ: ಬುದ್ಧ ಪೂರ್ಣಿಮೆ ನಿಮಿತ್ತ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿಯ ಕಾವೇರಿ ಸಾಯಿ ಧಾಮದಲ್ಲಿ ಗುರುವಾರ ವಿಶೇಷ ಪೂಜೆಗಳು ನಡೆಯಿತು.
ಸಾಯಿಧಾಮದ ಮುಖ್ಯಸ್ಥ ಜಯದೇವ್ ಅವರ ನೇತೃತ್ವದಲ್ಲಿ ಶಿರಡಿ ಸಾಯಿಬಾಬಾ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ಸಾಯಿ ಮಂದಿರದ ಆವರಣದಲ್ಲಿ ಭರತೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು.
ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳ ವಿವಿಧ ಗ್ರಾಮಗಳ ಸಾಯಿಬಾಬಾ ಭಕ್ತರು ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು, ಮೈಸೂರು, ಮಂಡ್ಯ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಪ್ರಸಾದ ವಿತರಣೆ ನಡೆಯಿತು.
ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯದಲ್ಲಿ ಬುದ್ಧ ಪೂರ್ಣಿಮೆ ನಿಮಿತ್ತ ಬೆಳಿಗ್ಗೆಯಿಂದ ಸಂಜೆ ವರೆಗೂ ವಿಶೇಷ ಪೂಜೆಗಳು ನಡೆದವು.
ಮಹಾಕಾಳಿ ಮೂರ್ತಿಗೆ ಬಗೆ ಬಗೆಯ ಹೂ, ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಮೋಹನ ಗುರೂಜಿ ಅವರ ನೇತೃತ್ವದಲ್ಲಿ ಅಭಿಷೇಕ, ಅರ್ಚನೆಗಳು ನಡೆದವು. ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿದ್ದರು. ಪ್ರಸಾದ ವಿತರಿಸಲಾಯಿತು.
ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬಾ ದೇವಾಲಯ, ಪಟ್ಟಣದ ಚಾಮುಂಡೇಶ್ವರಿ ದೇವಾಲಯ, ಕ್ಷಣಾಂಬಿಕಾ ದೇವಾಲಯ ಮತ್ತು ಮುಖ್ಯ ಬೀದಿಯಲ್ಲಿರುವ ಮಹಾಲಕ್ಷ್ಮಿ ದೇವಾಲಯಗಳಿಗೂ ಹುಣ್ಣಿಮೆ ನಿಮಿತ್ತ ಗುರುವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವೆ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.