ಮದ್ದೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳ ವರ್ತನೆಗೆ ಬೇಸತ್ತ, ತಾಲ್ಲೂಕಿನ ಯರಗನಹಳ್ಳಿ ಗ್ರಾಮಸ್ಥರು ಬಸ್ ನಿಲುಗಡೆ ಸ್ಥಳದಲ್ಲಿ ತಾವೇ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿಕೊಂಡಿದ್ದಾರೆ.
ಕೊರಟಗೆರೆ– ಕೊಳ್ಳೇಗಾಲ ಹೆದ್ದಾರಿಯಲ್ಲಿ ಬರುವ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಇರಲಿಲ್ಲ. ಯರಗನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಹನುಮಂತಪುರ, ಮಾರಸಿಂಗನಹಳ್ಳಿಯ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಬಸ್‌ಗಾಗಿ ಬಿಸಿಲು, ಮಳೆ ಎನ್ನದೆ ರಸ್ತೆಯಲ್ಲೇ ನಿಲ್ಲಬೇಕಿತ್ತು. ತಂಗುದಾಣ ನಿರ್ಮಿಸುವಂತೆ ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಕಂಬ, ಮರ, ಸಿಮೆಂಟ್ ಶೀಟ್‌ಗಳನ್ನು ಹಾಕಿತಂಗುದಾಣವನ್ನು ನಿರ್ಮಿಸಿದ್ದಾರೆ. ಈ ಕಾರ್ಯದಲ್ಲಿ ಮಹಾಲಿಂಗು, ರಾಮ ಕೃಷ್ಣಯ್ಯ, ಶಿವರಾಜು, ಶಿವಮಾದಯ್ಯ, ಲಿಂಗರಾಜು, ಬೋರಯ್ಯ, ಹೊಂ ಬಾಳಯ್ಯ, ಶಿವರಾಮು, ಚಿಕ್ಕೋನು, ಕೋಡಿಲಿಂಗಯ್ಯ, ರಾಜು ಬಿ, ಪ್ರಕಾಶ್, ಕೃಷ್ಣ, ಆನಂದ್ ಕೈಜೋಡಿಸಿದ್ದಾರೆ.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕ್ಷೇತ್ರದಲ್ಲಿಯೇ ತಂಗುದಾಣವಿಲ್ಲ. ಶಾಶ್ವತ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.