ADVERTISEMENT

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನ ಗೆದ್ದಿವೆ: ಸಿ.ಡಿ.ಗಂಗಾಧರ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:33 IST
Last Updated 23 ನವೆಂಬರ್ 2024, 14:33 IST
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರಿಂದ ಮಂಡ್ಯದಲ್ಲಿ ಶನಿವಾರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು  -ಪ್ರಜಾವಾಣಿ ಚಿತ್ರ 
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರಿಂದ ಮಂಡ್ಯದಲ್ಲಿ ಶನಿವಾರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು  -ಪ್ರಜಾವಾಣಿ ಚಿತ್ರ    

ಮಂಡ್ಯ: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಅಂಗವಾಗಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. 

ನಗರದ ಜೆ.ಸಿ. ವೃತ್ತದಲ್ಲಿ ಒಗ್ಗೂಡಿದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಿ.ಡಿ.ಗಂಗಾಧರ್‌ ಮಾತನಾಡಿ, ‘ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನರು ಆಶೀರ್ವದಿಸಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತ ಯೋಜನೆಗಳು, ಜನಪರ ಕಾರ್ಯಕ್ರಮಗಳು ಜನರ ಮನವನ್ನು ಗೆದ್ದಿವೆ ಎಂದು ಸಂತಸ ಹಂಚಿಕೊಂಡರು.

ADVERTISEMENT

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜವಬ್ದಾರಿಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನೀಡಲಾಗಿತ್ತು. ಅವರ ಸಾರಥ್ಯದಲ್ಲಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌  ಗೆಲುವು ಸಾಧಿಸಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ನಾಯಕ ಶಿವನಂಜು ಮಾತನಾಡಿ, ‘ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್ ಕೈ ಹಿಡಿದಿದೆ. ಉತ್ತಮವಾಗಿ ಅಲ್ಲಿ ಜನಸೇವೆ ಮಾಡಿದ್ದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು ಗೆಲುವಿಗೆ ಕಾರಣ ಎಂದು ತಿಳಿಸಿದರು.

ಮುಖಂಡರಾದ ರುದ್ರಪ್ಪ, ಅಪ್ಪಾಜಿಗೌಡ, ಕೆಬ್ಬಹಳ್ಳಿರಾಜು, ಶಿವರುದ್ರ, ವಿಜಯಕುಮಾರ್‌ ಚಂದಾಗಲು, ನಗರಸಭಾ ಸದಸ್ಯ ಶ್ರೀಧರ್, ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.