ADVERTISEMENT

ಕೆರಗೋಡು: ಮನೆಗಳ ಮೇಲೆ ಹನುಮಧ್ವಜ, ತಾಕತ್ತಿದ್ದರೆ ಧ್ವಜ ಇಳಿಸಿ ಎಂದು ಸವಾಲು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಕೆರಗೋಡು ಗ್ರಾಮದ ಮನೆಯೊಂದರ ಮುಂದೆ ಹನುಮ ಧ್ವಜ ಹಾರಿಸಲಾಯಿತು
ಕೆರಗೋಡು ಗ್ರಾಮದ ಮನೆಯೊಂದರ ಮುಂದೆ ಹನುಮ ಧ್ವಜ ಹಾರಿಸಲಾಯಿತು   

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌ ಹಾಗೂ ಸಂಘಪರಿವಾರದ ಕಾರ್ಯಕರ್ತರು ಶನಿವಾರ ಗ್ರಾಮದಲ್ಲಿ ಮನೆಗಳ ಮೇಲೆ ಹನುಮಧ್ವಜ ಹಾರಿಸುವ ಆಂದೋಲನಕ್ಕೆ ಚಾಲನೆ ನೀಡಿದರು.

108 ಅಡಿ ಧ್ವಜಸ್ತಂಭದ ಸಮೀಪದಲ್ಲೇ ಇರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧ್ವಜಗಳಿಗೆ ಪೂಜೆ ಸಲ್ಲಿಸಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. 300ಕ್ಕೂ ಹೆಚ್ಚು ಮನೆಗಳ ಮೇಲೆ ಯುವಕರು, ಮಹಿಳೆಯರು, ಮಕ್ಕಳು ಸ್ವಯಂ ಪ್ರೇರಿತವಾಗಿ ಧ್ವಜ ಹಾರಿಸಿದರು.

ಹಲವು ಮನೆಗಳ ಮುಂದೆ ಕಂಬ ನೆಟ್ಟು ಧ್ವಜ ಹಾರಿಸಿದರು. ಜೈಶ್ರೀರಾಮ್‌ ಘೋಷಣೆ ಕೂಗಿದರು. ಅಕ್ಕಪಕ್ಕದ ಗ್ರಾಮಗಳಲ್ಲೂ ಜನ ಮನೆಗಳ ಮುಂದೆ ಧ್ವಜ ಹಾರಿಸಿದರು.

ADVERTISEMENT

ಆಂದೋಲನಕ್ಕೆ ಚಾಲನೆ ನೀಡಿದ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಭಾನುಪ್ರಕಾಶ್‌ ಶರ್ಮಾ, ‘ಜಿಲ್ಲೆಯಲ್ಲಿ ಫೆ.9ರವರೆಗೆ ಆಂದೋಲನ  ನಡೆಸಿ, ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್‌ ಕುಮಾರ್‌ ಅವರು, ‘ಕಾಂಗ್ರೆಸ್‌ ಸರ್ಕಾರ ಒಂದು ಹನುಮಧ್ವಜ ತೆರವುಗೊಳಿಸಿತು. ಆದರೆ ಮನೆಮನೆಯಲ್ಲೂ ಹಾರಾಡುತ್ತಿವೆ. ತಾಕತ್ತಿದ್ದರೆ ತೆರವುಗೊಳಿಸಲಿ’ ಎಂದು ಸವಾಲು ಹಾಕಿದರು.

ಶಾಂತಿ ಸಭೆ ವಿಫಲ: ‘ಜಿಲ್ಲಾಧಿಕಾರಿ ಕುಮಾರ ಅವರು  ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ನಡೆಸಿದ ಶಾಂತಿ ಸಭೆ ವಿಫಲವಾಯಿತು’ ಎಂದು ಅಧಿಕಾರಿಗಳು ತಿಳಿಸಿದರು. ‘ಫೆ.9ರ ನಂತರ ಮತ್ತೆ ಸಭೆ ನಡೆಸಿ ಗೊಂದಲ ನಿವಾರಿಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

‘ಗ್ರಾಮದ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿದ ನಂತರವಷ್ಟೇ ಶಾಂತಿ ಸಭೆ ಕರೆಯಬೇಕು. ಅಲ್ಲಿಯವರೆಗೂ ಮಾತುಕತೆ ಅವಶ್ಯಕತೆ ಇಲ್ಲವೆಂದು ಗ್ರಾಮಸ್ಥರು ಪ್ರತಿಪಾದಿಸಿದರು’ ಎಂದು ಮೂಲಗಳು ತಿಳಿಸಿವೆ.

ಕೆರಗೋಡು ಗ್ರಾಮದ ಆಂಜನೇಯ ದೇವಾಲಯದಲ್ಲಿ ಹನುಮ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು

ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

‘ಲೋಕಸಭೆ ಚುನಾವಣೆ ಘೋಷಣೆಯಾಗುವವರೆಗೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಸೇರಿದಂತೆ ಯಾವುದೇ ಧರ್ಮದ ಧ್ವಜ ಬ್ಯಾನರ್‌ ಬಂಟಿಂಗ್ಸ್‌ ಹಾಕುವುದನ್ನು ನಿಷೇಧಿಸಬೇಕು‘ ಎಂದು ಒತ್ತಾಯಿಸಿ ಅಖಿಲ ಭಾರತ ವಕೀಲರ ಒಕ್ಕೂಟ ಒತ್ತಾಯಿಸಿದೆ. ಒಕ್ಕೂಟದ ಪದಾಧಿಕಾರಿಗಳು ಶನಿವಾರ ಈ ಸಂಬಂಧ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

‘ಪ್ರಚೋದನಕಾರಿ ಭಾಷಣ ಮಾಡುವವರಿಗೆ ಮಂಡ್ಯ ಪ್ರವೇಶಿಸಲು ಅವಕಾಶ ಕೊಡಬಾರದು’ ಎಂದು ಕೋರಿದ್ದಾರೆ. ಒಕ್ಕೂಟದ ಕಾರ್ಯದರ್ಶಿ ಚಂದನ್‌ ಕುಮಾರ್‌ ವಿದ್ಯಾರ್ಥಿ ಘಟಕದ ಮುಖಂಡ ಆಕಾಶ್‌ ಪ್ರಗತಿಪರ ಒಕ್ಕಲಿಗರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಾಗರ್‌ ಅರ್ಜಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಬಿ.ಟಿ.ವಿಶ್ವನಾಥ್‌ ವಕೀಲರಾದ ಪಲ್ಲವಿ ಚೇತನ್‌ ಆತಗೂರು ವಕಾಲತ್ತು ಸಲ್ಲಿಸಿದರು.

‘ಜಿಲ್ಲೆಯಲ್ಲಿ ಬಿಜೆಪಿ– ಜೆಡಿಎಸ್‌ ಒಂದುಗೂಡಿದ ನಂತರ ಕೋಮುಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತಿದೆ. ಅದನ್ನು ತಡೆಯಲು ಈಗ ಅರ್ಜಿ ಸಲ್ಲಿಸಲಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ಬಿ.ಟಿ.ವಿಶ್ವನಾಥ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.