ADVERTISEMENT

ಕ್ಯಾನ್ಸರ್‌ ಕೇಂದ್ರದ ಕಾಮಗಾರಿ ಸ್ಥಗಿತ- ಅಂತಿಮ ಹಂತದಲ್ಲಿ ನಿಂತ ಕೆಲಸ

2ನೇ ಬಾರಿ ಹೆಚ್ಚುವರಿ ಅನುದಾನಕ್ಕೆ ಮನವಿ, ಆಕ್ರೋಶ

ಎಂ.ಎನ್.ಯೋಗೇಶ್‌
Published 29 ಸೆಪ್ಟೆಂಬರ್ 2021, 12:29 IST
Last Updated 29 ಸೆಪ್ಟೆಂಬರ್ 2021, 12:29 IST
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಕ್ಯಾನ್ಸರ್‌ ಕೇಂದ್ರದ ನೋಟ
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಕ್ಯಾನ್ಸರ್‌ ಕೇಂದ್ರದ ನೋಟ   

ಮಂಡ್ಯ: ನಾಲ್ಕು ಜಿಲ್ಲೆ ರೋಗಿಗಳಿಗೆ ಆಸರೆಯಾಗಬೇಕಾಗಿದ್ದ ಕಿದ್ವಾಯಿ ಸ್ಮಾರಕ ಮಂಡ್ಯ ಕ್ಯಾನ್ಸರ್‌ ಕೇಂದ್ರದ ಕಾಮಗಾರಿ ಅಂತಿಮ ಹಂತದಲ್ಲಿ ಸ್ಥಗಿತಗೊಂಡಿದೆ. ಶೇ 90ರಷ್ಟು ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಹಂತದಲ್ಲಿ ಕೆಲಸ ನಿಲ್ಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

2018ರಲ್ಲಿ ಆರಂಭಗೊಂಡಿದ್ದ ಕಾಮಗಾರಿ 2019 ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಒಟ್ಟು ₹ 45 ಕೋಟಿ ಯೋಜನಾ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಶೇ 90 ಕಾಮಗಾರಿ ಪೂರ್ಣಗೊಂಡು ಈಗಾಗಲೇ ಒಂದು ವರ್ಷ ಕಳೆದಿದೆ. ಅಂತಿಮ ಹಂತದ ಕೆಲಸ ಪೂರ್ಣಗೊಳಿಸಿ, ಅವಶ್ಯಕ ಯಂತ್ರೋಪಕರಣ ಅಳವಡಿಸಿದರೆ ಆಸ್ಪತ್ರೆ ಸಿದ್ಧಗೊಳ್ಳುತ್ತದೆ. ಆದರೆ ಕಾಮಗಾರಿ ಪೂರ್ಣಗೊಳಿಸಲು ಮೀನಾಮೇಷ ಎಣಿಸುತ್ತಿರುವುದು ಅನುಮಾನಾಸ್ಪದವಾಗಿದೆ.

ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿದ್ದ ಕಿದ್ವಾಯಿ ಕ್ಯಾನ್ಸರ್‌ ಪೆರಿಫೆರಲ್‌ ಘಟಕ ಹಲವು ವರ್ಷಗಳಿಂದ ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನ ಜಿಲ್ಲೆಯ ರೋಗಿಗಳಿಗೆ ಸೇವೆ ನೀಡುತ್ತಿತ್ತು. ಜಿಲ್ಲೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಘಟಕವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತ್ತು. ಬೆಂಗಳೂರಿನ ಕ್ವಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ದೊರೆಯುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಮಂಡ್ಯ ಕೇಂದ್ರದಲ್ಲಿ ನೀಡುವ ಉದ್ದೇಶದಿಂದ 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.

ADVERTISEMENT

ಮತ್ತೆ ಅನುದಾನದ ಕೊರತೆ: ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದರೆ ₹ 38 ಕೋಟಿಗೆ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ ಕಾಮಗಾರಿ ತಡವಾಗಿ ಆರಂಭಗೊಂಡ ಕಾರಣ ವೆಚ್ಚ ₹ 45 ಕೋಟಿಗೆ ಹೆಚ್ಚಳವಾಯಿತು. ಕೇಂದ್ರ ಸರ್ಕಾರದಿಂದ ₹ 38 ಕೋಟಿ, ಉಳಿದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತ್ತು.

ಕಾಮಗಾರಿ ತಡವಾಗುತ್ತಿರುವ ಕಾರಣ ಈಗ 2ನೇ ಬಾರಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಕಟ್ಟಡದ ಗುತ್ತಿಗೆದಾರರ ಬೇಡಿಕೆ ಇಟ್ಟಿದ್ದಾರೆ. ಕಟ್ಟಡ ಕಾಮಗಾರಿಗೆ ಮಿಮ್ಸ್‌ ಆಡಳಿತ ಮಂಡಳಿ ₹ 11.25 ಕೋಟಿ ನೀಡಿತ್ತು. ಈಗ ಮತ್ತೆ ₹ 5 ಕೋಟಿಗೆ ಬೇಡಿಕೆ ಇಟ್ಟಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ.

‘ಹೆಚ್ಚುವರಿ ₹ 5 ಕೋಟಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದರೆ ಅಂತಿಮ ಹಂತದ ಕೆಲಸ ಪೂರ್ಣಗೊಳಿಸಲಾಗುವುದು. ಕಟ್ಟಡಕ್ಕೆ ವಿದ್ಯುತ್‌ ಅಳವಡಿಸುವ ಕಾಮಗಾರಿ ಬಾಕಿ ಉಳಿದಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ಬೆಂಗಳೂರು ಸಂಸ್ಥೆ ಮಾದರಿ: ಪರಿಫರಲ್‌ ಕ್ಯಾನ್ಸರ್‌ ಆಸ್ಪತ್ರೆ 1994ರಲ್ಲೇ ಆರಂಭವಾಗಿದ್ದರೂ ಕ್ಯಾನ್ಸರ್‌ ಚಿಕಿತ್ಸೆ ನೀಡಲು ಆಧುನಿಕ ಸೌಲಭ್ಯಗಳು ಇರಲಿಲ್ಲ. ಕೇವಲ ಒಂದು ರೇಡಿಯೋ ಥೆರಪಿ ಯಂತ್ರವಿತ್ತು. ಹೀಗಾಗಿ ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ಮೇಲೆ ಹೆಚ್ಚಿನ ರೋಗಿಗಳು ಅವಲಂಬಿತರಾಗಿದ್ದರು. ಕ್ಯಾನ್ಸರ್‌ ಆಸ್ಪತ್ರೆ ಇದ್ದೂ ಇಲ್ಲದಂತಿತ್ತು.

ಬೆಂಗಳೂರಿನ ಕಿದ್ವಾಯಿ ಮಾದರಿಯಲ್ಲಿ ಮಂಡ್ಯ ಕ್ಯಾನ್ಸರ್‌ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿತ್ತು. ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ, ಪಿಡಿಯಾಟ್ರಿಕ್ ಆಂಕಾಲಜಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ, ಬಾಯಿ ಕ್ಯಾನ್ಸರ್‌ ಚಿಕಿತ್ಸೆ, ಕಿಮೋಥೆರಪಿ, ರೋಗ ಲಕ್ಷಣ ವಿಭಾಗ, ಮೈಕ್ರೋಬಯಾಲಜಿ ಸೇರಿ ಹಲವು ವಿಭಾಗಗಳನ್ನು ತೆರೆಯುವ ಉದ್ದೇಶ ಹೊಂದಲಾಗಿತ್ತು.

ಬೆಂಗಳೂರಿನ ಕ್ವಿದ್ವಾಯಿ ಸಂಸ್ಥೆ ನಿರ್ದೇಶಕ ಸಿ.ರಾಮಚಂದ್ರ 2019ರಲ್ಲಿ ಭೇಟಿ ನೀಡಿ, ಪರಿಶೀಲಿಸಿ ‘ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ, 2020ಕ್ಕೆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ’ ಎಂದಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಮುಗಿದಿಲ್ಲ.

‘ಮೇಲ್ದರ್ಜೆ ನೆಪದಲ್ಲಿ ಇರುವ ಆಸ್ಪತ್ರೆಯನ್ನೂ ಕೆಡವಿದ್ದಾರೆ. ಜಿಲ್ಲೆಯ ಜನರಿಗೆ ಈಗ ಕ್ಯಾನ್ಸರ್‌ ಚಿಕಿತ್ಸೆ ದೊರೆಯದಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕು’ ಎಂದು ಅಶೋಕ್‌ ನಗರದ ನಿವಾಸಿ ಚಂದ್ರಶೇಖರ್‌ ಒತ್ತಾಯಿಸಿದರು.

ಹೆಚ್ಚುವರಿ ಅಂತಸ್ತು ಕಟ್ಟಿದ್ದೇಕೆ?

ಮೂಲ ಯೋಜನೆಯಲ್ಲಿ ಜಿ ಪ್ಲಸ್‌ 2 (ತಳ, ಮೊದಲ, 2ನೇ ಅಂತಸ್ತು) ಕಟ್ಟಡ ಕಾಮಗಾರಿಕೆ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಹಿಂದಿನ ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಹಾಗೂ ಗುತ್ತಿಗೆದಾರರು ಜಿ ಪ್ಲಸ್‌ 3 ಕಟ್ಟಡ ನಿರ್ಮಾಣ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ. ಮೂಲ ಯೋಜನೆ ಕೈಬಿಟ್ಟು ಇನ್ನೊಂದು ಅಂತಸ್ತು ಕಟ್ಟಿದ್ದು ಏಕೆ ಎಂಬ ಪ್ರಶ್ನೆ ನಿರ್ಮಾಣವಾಗಿದೆ.

‘200 ಹಾಸಿಗೆ ಸಾಮರ್ಥ್ಯದ ಕಟ್ಟಡದ ಯೋಜನೆ ಹೊಂದಲಾಗಿತ್ತು. ಆದರೆ ಇನ್ನೊಂದು ಅಂತಸ್ತು ನಿರ್ಮಾಣವಾಗಿರುವ ಕಾರಣ ಅನುದಾನ ಕೊರತೆಯುಂಟಾಗಿದೆ. ಅತ್ಯಾಧುನಿಕ ಯಂತ್ರಗಳ ಖರೀದಿಗೆ ಇನ್ನೂ ಹೆಚ್ಚು ಹಣ ಬೇಕಾಗಿದೆ. ಎಲ್ಲಾ ಗೊಂದಲ ನಿವಾರಣೆಯಾಗಿ ಆಸ್ಪತ್ರೆ ಆರಂಭವಾಗುವುದು ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ತಜ್ಞ ವೈದ್ಯರೊಬ್ಬರು ಅನುಮಾನ ವ್ಯಕ್ತಪಡಿಸಿದರು.

ಅಂಕಿ–ಅಂಶ

ಯೋಜನಾ ವೆಚ್ಚ: ₹ 45 ಕೋಟಿ
ಕೇಂದ್ರ ಸರ್ಕಾರ: ₹ 38 ಕೋಟಿ
ರಾಜ್ಯ ಸರ್ಕಾರ: ₹ 7 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.