ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಇಲ್ಲಿನ ಚೆಲುವನಾರಾಯಣ ಸ್ವಾಮಿಗೆ ಗುರುವಾರ ಬ್ರಹ್ಮರಥೋತ್ಸವ ಸಂಭ್ರದಿಂದ ನೆರವೇರಿತು. ಸುಮಾರು ಐವತ್ತು ಸಾವಿರ ಭಕ್ತರು ತೇರಿಗೆ ಹಣ್ಣು, ದವನ ಎಸೆದರು. ರಥಾರೂಢನಾದ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು.
ತಿರುಪತಿ- ತಿರುಮಲ ದೇವಸ್ಥಾನದ ಪೆರಿಯ ಜೀಯರ್ ಸ್ವತಂತ್ರ ಪೂರ್ವದಲ್ಲಿ ಕೊಡುಗೆಯಾಗಿ ನೀಡಿದ ಬೃಹತ್ ರಥಕ್ಕೆ ಜಯವಿಜಯ ಸಾರಥಿಯೊಂದಿಗೆ ತಳಿರು ತೋರಣ, ಪುಷ್ಪಾಲಂಕಾರ ಮಾಡಲಾಗಿತ್ತು. ಮಹಾರಥ ನಾಲ್ಕುಬೀದಿಗಳಲ್ಲಿ ಸಾಗಿತು.
ಬೆಳಿಗ್ಗೆ 5ಕ್ಕೆ ಆರಂಭವಾದ ದೇವಾಲಯದ ನಿತ್ಯಪೂಜಾ ಕೈಂಕರ್ಯ 8ಗಂಟೆ ವರೆಗೆ ನಡೆದವು. ಅಮ್ಮನವರ ಸನ್ನಿಧಿಯ ಬಳಿ ವಜ್ರಖಚಿತ ರಾಜಮುಡಿ ಕಿರೀಟ ಧರಿಸಿ ಶ್ರೀದೇವಿ, ಭೂದೇವಿ ಕಲ್ಯಾಣನಾಯಕಿ ಸಮೇತ ವಿರಾಜಮಾನನಾದ ಚೆಲುವನಾರಾಯಣ ಸ್ವಾಮಿಗೆ ಯಾತ್ರಾದಾನ ನೆರವೇರಿತು.
ಬೆಳಿಗ್ಗೆ 9ಕ್ಕೆ ಸ್ವಾಮಿಯ ಉತ್ಸವ ಹೊರ ಪ್ರಾಕಾರದ ಮೂಲಕ ರಥಮಂಟಪ ತಲುಪಿತು. ರಥಕ್ಕೆ ಮೂರು ಪ್ರದಕ್ಷಿಣೆ ಬಳಿಕ ಜೋಯಿಸರಿಂದ ಮಹೂರ್ತ ಪಠಣ ನೆರವೇರಿತು. 10.30ರಿಂದ 3 ಗಂಟೆ ಚಲಿಸಿದ ರಥ ರಥಮಂಟಪದಲ್ಲಿ ನಿಂತಿತು.
ನಂತರ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಅಭಿಷೇಕ ನಡೆಯಿತು. ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ನೆರವೇರಿತು.
ಇಂದು ತೆಪ್ಪೋತ್ಸವ: ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ಮಾರ್ಚ್ 18ರಂದು ರಾತ್ರಿ 7 ಗಂಟೆಗೆ ನೆರವೇರಲಿದೆ. ಕಲ್ಯಾಣಿಗೆ ದೀಪಾಲಂಕಾರ ಮಾಡಲಾಗಿದ್ದು, ಲೇಸರ್ ಷೋ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.