ಪಾಂಡವಪುರ: ‘ರೈತರು ರಾಸುಗಳ ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿ ತೋರಬಾರದು’ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
ಪಟ್ಟಣದ ಮನ್‌ಮುಲ್ ಉಪ ಕಚೇರಿಯಲ್ಲಿ ರೈತ ಕಲ್ಯಾಣ ಟ್ರಸ್ಟ್, ಗುಂಪು ವಿಮಾ ಯೋಜನೆಯ ಫಲಾನುಭವಿಗಳು ಹಾಗೂ ಮೃತಪಟ್ಟ ರಾಸುಗಳ ಮಾಲೀಕರಿಗೆ ವಿಮಾ ಹಣದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
‘ಒಕ್ಕೂಟ ಮಾರಾಟ ಮಾಡುವ ‘ಅಜ್ಮಲ್’, ‘ಮಿನರಲ್’, ‘ಗೋಧಾಶಕ್ತಿ’ಯನ್ನು ನಿಯಮಿತವಾಗಿ ರಾಸುಗಳಿಗೆ ನೀಡುವುದರಿಂದ ಹಾಲು ಗುಣಮಟ್ಟದ್ದಾಗಿರುತ್ತದೆ. ಗುಣಮಟ್ಟದ ಹಾಲು ಪೂರೈಕೆಯಾದರೆ ಸರ್ಕಾರ ನೀಡುವ ಸಬ್ಸಿಡಿ ಹಣ ವಾಪಸ್ಸಾಗದೆ ಉತ್ಪಾದಕರಿಗೆ ತಲುಪುತ್ತದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವುದು ಸಂತಸದ ವಿಷಯ. ಒಕ್ಕೂಟ ಸಬ್ಸಿಡಿ ದರದಲ್ಲಿ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಇದರ ಉಪಯೋಗ ಪಡೆದುಕೊಂಡು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸಬೇಕು. ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಮಯಕ್ಕೆ ಸರಿಯಾಗಿ ಬಟವಾಡೆ ಆಗುವುದಿಲ್ಲ. ಆದರೆ ಹಾಲು ಪೂರೈಸಿದ ಉತ್ಪಾದಕರಿಗೆ ವಾರಕ್ಕೊಮ್ಮೆ ಯಾವುದೇ ತೊಂದರೆಯಿಲ್ಲದೆ ಹಣ ಪಾವತಿಯಾಗುತ್ತದೆ’ ಎಂದು ತಿಳಿಸಿದರು.
‘ಪ್ರತಿಯೊಬ್ಬ ಹಾಲು ಉತ್ಪಾದಕರು ಕಡ್ಡಾಯವಾಗಿ ಗುಂಪು ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕಿದೆ. ರಾಸುಗಳ ವಿಮೆ ಹಣದ ಶೇ 75ರಷ್ಟನ್ನು ಒಕ್ಕೂಟ ಭರಿಸುತ್ತದೆ. ಉತ್ಪಾದಕರು ಶೇ 25ರಷ್ಟು ಕಟ್ಟಿದರೆ ರಾಸುಗಳು ಆಕಸ್ಮಿಕವಾಗಿ ಸತ್ತ ಸಂದರ್ಭದಲ್ಲಿ ಸಹಾಯವಾಗುತ್ತದೆ’ ಎಂದು ಹೇಳಿದರು.
ಮನ್‌ಮುಲ್ ಉಪ ನಿರ್ದೇಶಕ ಆರ್.ಪ್ರಸಾದ್ ಮಾತನಾಡಿ, ‘ತಾಲ್ಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ರಾಸುಗಳಿದ್ದು, ಈ ಪೈಕಿ ಕೇವಲ 8 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ಒಕ್ಕೂಟ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಈ ಸೌಲಭ್ಯಗಳು ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಪ್ರಚಾರ ಮತ್ತು ಮಾಹಿತಿ ಕೊರತೆಯೇ ಇದಕ್ಕೆ ಕಾರಣ. ಡೇರಿ ಕಾರ್ಯದರ್ಶಿಗಳು ಹಾಲು ಉತ್ಪಾದಕರಿಗೆ ಸಮರ್ಪಕ ಮಾಹಿತಿ ನೀಡಬೇಕಿದೆ’ ಎಂದು ಸೂಚಿಸಿದರು.
ಮನ್‌ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ಉಷಾ, ಜಗದೀಶ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.