ಮಂಡ್ಯ: ‘ಕೆ.ಆರ್.ಎಸ್ ಅಣೆಕಟ್ಟೆ ತುಂಬಿದೆ, ತಮಿಳುನಾಡು ಕೇಳುವ ಮೊದಲೇ ನಮ್ಮ ಸರ್ಕಾರ ನೀರು ಬಿಟ್ಟು ರೈತರ ಬಾಳಲ್ಲಿ ಚೆಲ್ಲಾಟವಾಡುತ್ತಿದೆ. ಆದರೆ, ಮತ್ತೊಂದು ಅಣೆಕಟ್ಟೆ ಕಟ್ಟುವ ಮೂಲಕ ಎಲ್ಲರೂ ನೀರು ಬಳಸಿಕೊಳ್ಳಲು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಬೇಕು. ಜೊತೆಗೆ ನಮ್ಮ ಜಿಲ್ಲೆಯ ವಿ.ಸಿ ನಾಲೆಗಳಿಗೆ ವರ್ಷಪೂರ್ತಿ ನೀರು ಹರಿಸಬೇಕು’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಸಂಚಾಲಕಿ ಸುನಂದಾ ಜಯರಾಂ ಒತ್ತಾಯಿಸಿದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ 25ನೇ ಸೋಮವಾರದ ಚಳವಳಿಯಲ್ಲಿ ಅವರು ಮಾತನಾಡಿದರು. ನಮ್ಮ ರೈತರ ಪರವಾಗಿ ವಿಭಿನ್ನ ರೀತಿಯಲ್ಲಿ ಹಲವು ಒತ್ತಾಯಗಳನ್ನು ಇಟ್ಟುಕೊಂಡು ಕಾವೇರಿ ಹೋರಾಟದ ರೂಪುರೇಷೆ ತಯಾರಿಸುತ್ತೇವೆ ಎಂದರು.
ಕಾವೇರಿ ನೀರಿನ ವಿವಾದ ಪ್ರಾರಂಭವಾದ ನಂತರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ 151 ದಿನಗಳ ನಿರಂತರ ಧರಣಿ ಹಾಗೂ 25 ಸೋಮವಾರ ನಡೆಸಿದ ಕಾವೇರಿ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಸರ್ಕಾರ ನಾಲೆಗಳಲ್ಲಿ ನೀರು ಹರಿಸಿರುವುದರಿಂದ ಮತ್ತು ಕೃಷ್ಣರಾಜಸಾಗರ ಅಣೆಕಟ್ಟು ತುಂಬಿರುವುದರಿಂದ ಸದ್ಯಕ್ಕೆ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ತಮಿಳುನಾಡಿನವರು ಬುದ್ಧಿವಂತಿಕೆ ಮಾಡುತ್ತಾ ಬರುತ್ತಿದ್ದಾರೆ. ಪದೇ ಪದೇ ಕೋರ್ಟ್ ಮುಂದೆ, ಸಮಿತಿ ಮುಂದೆ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ನಮ್ಮಲ್ಲಿ ಆ ಮಾಹಿತಿಗಳನ್ನು ಕೊಡೋರು ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಳೆ ಬಿದ್ದ ಪ್ರಮಾಣವನ್ನು ಆಧರಿಸಿ ನೀವು ನಮಗೆ ನೀರು ಕೊಡಿ ಅನ್ನುವ ತಮಿಳುನಾಡಿನವರು ಮೂರು ನದಿಗಳ ಜೋಡಣೆ ಮಾಡಿಕೊಂಡು ಹೊಸದಾಗಿ 1.5 ಲಕ್ಷ ಎಕರೆಗೆ ಕೃಷಿಯನ್ನು ವಿಸ್ತಾರ ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕೆ ಕೊಟ್ಟಿರುವ ನೀರಿನ ಹಂಚಿಕೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಯೋಚಿಸಬೇಕು. ಇದಕ್ಕೆ ಮೇಕೆದಾಟು ಯೋಜನೆ ಅನಿವಾರ್ಯ ಮತ್ತು ಅಗತ್ಯ’ ಎಂದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಎಂ.ಎಲ್. ತುಳಸೀಧರ, ಎಸ್.ನಾರಾಯಣ, ಶಂಕರೇಗೌಡ, ಬೋರಲಿಂಗಯ್ಯ, ನಾರಾಯಣಸ್ವಾಮಿ, ಎಚ್.ಡಿ. ದೇವೇಗೌಡ, ಇಂದಿರಾ, ದೇವೀರಮ್ಮ, ಚಿಕ್ಕತಾಯಮ್ಮ ಭಾಗವಹಿಸಿದ್ದರು.
ನೀರು ಬಿಟ್ಟು, ರೈತರ ಬಾಳಲ್ಲಿ ಚೆಲ್ಲಾಟ 151 ದಿನಗಳ ನಿರಂತರ ಧರಣಿ ಕೃಷಿಕ್ಷೇತ್ರ ವಿಸ್ತರಿಸಿಕೊಂಡ ತಮಿಳುನಾಡು
‘ಸರ್ಕಾರದ ನಡೆ ಸರಿಯಲ್ಲ’ ‘ತಮಿಳುನಾಡಿಗೆ ಯಾರನ್ನು ಹೇಳದೆ ಕೇಳದೆ ನೀರು ಬಿಟ್ಟ ಸರ್ಕಾರದ ನಡೆ ಸರಿಯಲ್ಲ ಜೊತೆಗೆ 8 ಸಾವಿರ ಕ್ಯುಸೆಕ್ ನೀರನ್ನು ಬಿಡುತ್ತೇವೆ. ಈ ತೀರ್ಮಾನ ಮಾಡಿದ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು. ಈಗ ಅಣೆಕಟ್ಟೆಯಲ್ಲಿ ಸಂಗ್ರಹಗೊಂಡಿರುವ ನೀರನ್ನು ಸಂರಕ್ಷಣೆ ಮಾಡಿಕೊಂಡು ಈಗಿನ ಬೆಳೆ ಎರಡನೇ ಬೆಳೆ ಹಾಗೂ ವರ್ಷಪೂರ್ತಿ ನೀರು ಪೂರೈಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳಬೇಕು’ ಎಂದು ಸುನಂದಾ ಜಯರಾಂ ಒತ್ತಾಯಿಸಿದರು. ‘ಕರ್ನಾಟಕ ತನಗೆ ಹಂಚಿರುವ ನೀರನ್ನು ಉಪಯೋಗಿಸಿಕೊಂಡಿಲ್ಲ. ಕರ್ನಾಟಕಕ್ಕೆ ನೀರಿನ ಅವಶ್ಯ ಇಲ್ಲ. ಆ ನೀರು ನಮ್ಮ ನೀರು ಎಂದು ಪರಿಗಣಿಸಬೇಕು’ ಎಂದು ತಮಿಳುನಾಡು ವಾದ ಮಂಡಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಕರ್ನಾಟಕ ಅನ್ಯಾಯವಾಗುತ್ತಿದೆ ನ್ಯಾಯ ಮಂಡಳಿ ತೀರ್ಪು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ವಿರುದ್ಧ ನಿರಂತರ ಚಳವಳಿಗಳು ಅಗತ್ಯತೆ ಇರುತ್ತದೆ. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಚಳವಳಿಯ ಸ್ವರೂಪ ಬದಲಾಯಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.