ADVERTISEMENT

ಮುತ್ತತ್ತಿ: ತೆಪ್ಪದ ಮೂಲಕ ಗರ್ಭಿಣಿ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 7:16 IST
Last Updated 2 ಆಗಸ್ಟ್ 2024, 7:16 IST
ಮುತ್ತತ್ತಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಣೆ ಮಾಡಿದರು.
ಮುತ್ತತ್ತಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಣೆ ಮಾಡಿದರು.   

ಹಲಗೂರು: ಸಮೀಪದ ಮುತ್ತತ್ತಿ ಗ್ರಾಮದ ನಿವಾಸಿ ರಾಜು ಅವರ ಪತ್ನಿ ಅನು ಗರ್ಭಿಣಿಯಾಗಿದ್ದು, ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಪ್ರಯಾಣಿಸಲು ತೊಂದರೆ ಆಗಬಹುದೆಂದು ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತ ಅವರನ್ನು ಗುರುವಾರ ಸ್ಥಳಾಂತರಿಸಿತು.

ಕಾವೇರಿ ನದಿ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ದಿನಗಳಿಂದ ಪ್ರವಾಹದ ಪರಿಸ್ಥಿತಿ ಇದೆ. ಮುತ್ತತ್ತಿ ತಲುಪಲು ಸಂಪರ್ಕ ಸೇತುವೆಯಾಗಿರುವ ಕೆಸರಕ್ಕಿ ಹಳ್ಳದ ಬಳಿ ಕಾವೇರಿ ನದಿ ಹಿನ್ನೀರು ಸುಮಾರು ಹತ್ತು ಅಡಿಯಷ್ಟು ಸೇತುವೆ ಮೇಲೆ ತುಂಬಿದ್ದು, ಸಾರ್ವಜನಿಕರ ಸಂಚಾರಕ್ಕೆ ತುಂಬಾ ಆಡಚಣೆ ಉಂಟಾಗಿದೆ. ಈ ಕ್ಲಿಷ್ಟ ಪರಿಸ್ಥಿತಿಯನ್ನು ಮನಗಂಡ ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಮುತ್ತತ್ತಿಗೆ ಆಗಮಿಸಿ, ಕುಟುಂಬದವರ ಜೊತೆ ಮಾತನಾಡಿ ಗರ್ಭಿಣಿ ಅನು ಅವರನ್ನು ಸ್ಥಳಾಂತರ ಮಾಡಲು ಮನವೊಲಿಸಿದರು.

ಕಾವೇರಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ವಾಹನದಲ್ಲಿ ಮುತ್ತತ್ತಿಯಿಂದ ಗರ್ಭಿಣಿಯನ್ನು ಕೆಸರಕ್ಕಿ ಹಳ್ಳದವರೆಗೆ ಕರೆತರಲಾಯಿತು. ಅರಣ್ಯ ಇಲಾಖೆಗೆ ಸೇರಿದ ತೆಪ್ಪದ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆ ತಂದು ನಂತರ ಕುಟುಂಬದ ಇಚ್ಚೆಯಂತೆ ಕನಕಪುರ ತಾಲ್ಲೂಕಿನ ಅಚ್ಚಲು ಗ್ರಾಮಕ್ಕೆ ಆರೋಗ್ಯ ಇಲಾಖೆ ಅ್ಯಂಬುಲೆನ್ಸ್‌‌ನಲ್ಲಿ ತಲುಪಿಸಲಾಯಿತು. 

ADVERTISEMENT

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಎನ್.ಲೋಕೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉದಯ್ ಕುಮಾರ್, ಫಾರ್ಮಸಿ ಅಧಿಕಾರಿ ಶಿವಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ, ಅರೋಗ್ಯ ಸುರಕ್ಷಾಣಾಧಿಕಾರಿ ಶ್ವೇತಾ, ಆಶಾ ಕಾರ್ಯಕರ್ತೆ ಲಲಿತಾಬಾಯಿ ಇದ್ದರು.

ಕೆಸರಕ್ಕಿ ಹಳ್ಳ ದಾಟಿ ಸುರಕ್ಷಿತ ಪ್ರದೇಶ ತಲುಪಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.