ಮಂಡ್ಯ: ‘ಕಾವೇರಿ ನೀರು ಪಡೆಯುವುದಕ್ಕಾಗಿ ತಮಿಳುನಾಡು ಸರ್ಕಾರ ಕುತಂತ್ರ ಮಾರ್ಗ ಅನುಸರಿಸುತ್ತಿದೆ. ಅಂತರರಾಜ್ಯ ಜಲವಿವಾದವನ್ನು ಕಾನೂನು ಹೋರಾಟದ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದರೂ ಅಲ್ಲಿಯ ಸರ್ಕಾರ ವಾಮಮಾರ್ಗದ ಮೂಲಕ ನೀರು ಪಡೆಯುತ್ತಿದೆ’ ಎಂದು ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ವತಿಯಿಂದ ನಡೆದ ಕಾವೇರಿ ನದಿ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಅಧಿಕಾರದ ಗದ್ದುಗೆ ಹಿಡಿಯುವ ಪಕ್ಷ ಬೆಂಬಲಿಸಿ ಕಾವೇರಿ ನ್ಯಾಯಾಧೀಕರಣ ರಚನೆಗಾಗಿ ದೊಡ್ಡ ಲಾಬಿಯನ್ನೇ ತಮಿಳುನಾಡು ಮಾಡಿತು. ಅಲ್ಲಿಂದಲೇ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆರಂಭವಾಯಿತು. ಕರ್ನಾಟಕ ರಾಜ್ಯದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಾಜ್ಯದ ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ’ ಎಂದರು.
‘ಈಗ ಜಲಾಶಯಗಳು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರಗಳ ನಡುವೆ ಸಿಲುಕಿಕೊಂಡಿವೆ. ಇವುಗಳ ರಚನೆಯಿಂದ ತಮಿಳುನಾಡಿಗೆ ಮಾತ್ರ ಅನುಕೂಲವಾಗುತ್ತಿದ್ದು ಕರ್ನಾಟಕಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ. ಅವೈಜ್ಞಾನಿಕ ಶಿಫಾರಸು, ಆದೇಶ ಮಾಡುತ್ತಿರುವ ಈ ಸಮಿತಿ, ಪ್ರಾಧಿಕಾರಗಳು ರದ್ದಾಗಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ಸಂದರ್ಭದಲ್ಲಿ ರೈತರು ಅನ್ಯಾಯದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ರೈತರ ಬದುಕಿಗೆ ಅರ್ಥವಿಲ್ಲದಂತಾಗುತ್ತದೆ. ಜಗತ್ತಿನ ಯಾವ ಭಾಗದಲ್ಲಿಯೂ ಕಾವೇರಿಯಂತಹ ಹೋರಾಟ ನಡೆದಿಲ್ಲ, ಹೋರಾಟ ಜಗತ್ತಿನ ಇತಿಹಾಸದ ಪುಟ ಸೇರಿದೆ. ಈಗಲೂ ನಮ್ಮ ಹಕ್ಕಿಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ’ ಎಂದರು.
‘ನೀರಿಗಾಗಿ ನಮ್ಮ ಎಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಕೆಲವರು ಮತ ಬ್ಯಾಂಕ್, ಇನ್ನೂ ಕೆಲವರು ಸ್ಥಾನಮಾನಕ್ಕಾಗಿ ಹೋರಾಟದಲ್ಲಿ ಭಾಗಿಯಾಗಬಹುದು, ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಹೋರಾಟ ನಿರಂತರವಾಗಿ ನಡೆದರೆ ಮಾತ್ರ ನ್ಯಾಯ ದೊರೆಯುತ್ತದೆ. ಪಕ್ಷ ಅಧಿಕಾರದಲ್ಲಿದ್ದಾಗ ಆ ಪಕ್ಷದ ನಾಯಕರ ವರ್ತನೆ, ಅವರೇ ವಿರೋಧ ಪಕ್ಷದಲ್ಲಿದ್ದಾಗ ಬದಲಾದ ಅವರ ವರ್ತನೆ ಎಲ್ಲವನ್ನೂ ಜನತೆ ನೋಡಿದ್ದಾರೆ’ ಎಂದರು.
ಕಾಂಗ್ರೆಸ್ ಮುಖಂಡ ಎಂ.ಎಸ್.ಆತ್ಮಾನಂದ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಅಂದಾನಿ ಸೋಮನಹಳ್ಳಿ, ಬೇಕ್ರಿ ರಮೇಶ್, ಚಿದಂಬರ್, ಶಂಕರೇಗೌಡ, , ಪುಟ್ಟಮ್ಮ, ನಿರ್ಮಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.