ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡಪಾಳ್ಯ, ಮುಂಡೊಗದೊರೆ, ಕೆ.ಶೆಟ್ಟಹಳ್ಳಿ, ಚಿಕ್ಕಪಾಳ್ಯ ಬಳಿ ಹರಿಯುವ ಚಿಕ್ಕದೇವರಾಯಸಾಗರ (ಸಿಡಿಎಸ್) ನಾಲೆಯಲ್ಲಿ ಸಹಸ್ರಾರು ಮೀನುಗಳು ಸತ್ತು ತೇಲುತ್ತಿವೆ.
ತಾಲ್ಲೂಕಿನ ದರಸಗುಪ್ಪೆ ಕಡೆಯಿಂದ ಹರಿದು ಬರುವ ನಾಲೆಯ ಮೂಲಕ ಈ ಮೀನುಗಳು ತೇಲುತ್ತಾ ಬರುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು. ಎರಡು ಕೆ.ಜಿ. ತೂಕದ ಮೀನುಗಳೂ ಸತ್ತಿದ್ದು, ನೀರಿನ ಜತೆ ಕೊಚ್ಚಿಕೊಂಡು ಬರುತ್ತಿವೆ. ಭಾನುವಾರ ಮುಂಜಾನೆಯಿಂದ ನಾಲೆ ಯಲ್ಲಿ ನೀರಿನ ಹರಿವು ಹೆಚ್ಚಿಸಿದ ಬಳಿಕ ಸತ್ತ ಮೀನುಗಳು ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮೀನುಗಳನ್ನು ಹದ್ದು, ನೀರು ಕಾಗೆ ಇತರ ಪಕ್ಷಿಗಳು ಹಿಡಿದು ತಿನ್ನುತ್ತಿವೆ. ಕೆಲವು ಮೀನುಗಳು ಗಬ್ಬು ವಾಸನೆ ಬೀರುತ್ತಿವೆ.
‘ತಾಲ್ಲೂಕಿನ ದರಸಗುಪ್ಪೆ ಬಳಿ ಪಿಎಸ್‌ಎಸ್‌ಕೆ ಕಾರ್ಖಾನೆಯ ವಿಷಕಾರಿ ರಾಸಾಯನಿಕ ಸಿಡಿಎಸ್ ನಾಲೆಗೆ ಸೇರುತ್ತಿದೆ. ಮೂರ್ನಾಲ್ಕು ದಿನಗಳ ಕಾಲ ನಾಲೆಯಲ್ಲಿ ನೀರು ನಿಲ್ಲಿಸಿದ್ದ ಸಂದರ್ಭದಲ್ಲಿ ನಾಲೆಗೆ ಅಪಾರ ಪ್ರಮಾಣದ ರಾಸಾಯನಿಕವನ್ನು ಬಿಡಲಾಗಿದೆ. ಇದರಿಂದ ಮೀನುಗಳ ಉಸಿರಾಟಕ್ಕೆ ತೊಂದರೆಯಾಗಿ ಸಾವಿರಾರು ಮೀನುಗಳ ಮೃತಪಟ್ಟಿವೆ. ನಾಲೆಗೆ ರಾಸಾಯನಿಕ ಸೇರುವುದನ್ನು ತಡೆಗಟ್ಟಬೇಕು’ ಎಂದು ರೈತ ಮುಖಂಡರಾದ ದೊಡ್ಡಪಾಳ್ಯ ಜಯರಾಮೇಗೌಡ, ದರಸಗುಪ್ಪೆ ಹನುಮಂತು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.