ADVERTISEMENT

ಮಂಡ್ಯ: ದುರ್ಯೋಧನನಂತೆ ಕೇಂದ್ರ ಸರ್ಕಾರದ ವರ್ತನೆ

ಮಂಡ್ಯ ತಾಲ್ಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:45 IST
Last Updated 18 ಜನವರಿ 2021, 1:45 IST
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ನಡೆದ ಮಂಡ್ಯ ತಾಲ್ಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಶೋಧಕ ಹಂ.ಪ ನಾಗರಾಜಯ್ಯ ಮಾತನಾಡಿದರು (ಎಡಚಿತ್ರ). ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ಮಧುಸೂದನ ಮದ್ದೂರು ಅವರ ನೇಮ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ನಡೆದ ಮಂಡ್ಯ ತಾಲ್ಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಶೋಧಕ ಹಂ.ಪ ನಾಗರಾಜಯ್ಯ ಮಾತನಾಡಿದರು (ಎಡಚಿತ್ರ). ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ಮಧುಸೂದನ ಮದ್ದೂರು ಅವರ ನೇಮ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು   

ಮಂಡ್ಯ: ‘ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೋಮುಖ ವ್ಯಾಘ್ರವಾಗಿದೆ. ಧರ್ಮರಾಯನ ಮುಖವಾಡ ಧರಿಸಿಕೊಂಡು ದುರ್ಯೋಧನ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಭಾಷಾ ವಿಜ್ಞಾನಿ, ಸಂಶೋಧಕ ಹಂ.ಪ.ನಾಗರಾಜಯ್ಯ ಟೀಕಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ನಗರದ ಕರ್ನಾಟಕ ಸಂಘದ ಬಯಲು ರಂಗಮಂದಿರದ ಆವರಣದಲ್ಲಿನ ಲೀಲಮ್ಮ ಮತ್ತು ಎಂ.ಕೆ.ಶಿವನಂಜಪ್ಪ ಪ್ರಧಾನ ವೇದಿಯಲ್ಲಿ ಭಾನುವಾರ ನಡೆದ ಮಂಡ್ಯ ತಾಲ್ಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು 50 ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಸರಿಯಾದ ಪರಿಹಾರ ಕ್ರಮ ಕೈಗೊಂಡಿಲ್ಲ. ರೈತ ಪರ, ಸಮಾಜ ಪರ, ಜೀವ ಪರವಾದ ರೀತಿಯಲ್ಲಿ ವರ್ತಿಸುತ್ತಿಲ್ಲ. ನಿಷ್ಕರುಣೆ, ನಿರ್ದಯಿ ನಿಲುವಿನ ಪರವಾಗಿ ನಿಂತಿದ್ದಾರೆ ಎಂದು ದೂರಿದರು.

ADVERTISEMENT

ಕೇಂದ್ರ ಸರ್ಕಾರ ದೇಶದಲ್ಲಿ ವಿರೋಧ ಪಕ್ಷಗಳನ್ನು ದಮನ ಮಾಡುತ್ತಿದೆ. ಯಾವುದೇ ಪಕ್ಷದಲ್ಲಿ ರಾಷ್ಟ್ರ ನಾಯಕ ಬೆಳೆಯದ ರೀತಿಯಲ್ಲಿ ದಮನಕಾರಿ ನೀತಿ ಅನುರಿಸುತ್ತಿದೆ. ನಾಯಕರ ವಿರುದ್ಧ ಆರೋಪ ಮಾಡುವುದು, ಐಟಿ ಬಳಸಿ ಜೈಲಿಗೆ ಕಳುಹಿಸಿ ಪ್ರಬಲವಾಗಿ ಬೆಳೆಯುತ್ತಿರುವ ನಾಯಕರನ್ನು ತುಳಿಯುತ್ತಿದ್ದಾರೆ. ಪ್ರಬಲ ನಾಯಕರನ್ನು ಅನೈತಿಕವಾಗಿ ಸೋಲಿಸುವ ಬದಲು ಬ್ಯಾಲೆಟ್‌ ಪೇಪರ್‌ನಿಂದ ಸೋಲಿಸಬೇಕು. ಹತ್ತಿಕ್ಕುತ್ತಿರುವ, ತುಳಿಯುತ್ತಿರುವ ಕೆಲಸ ತರವಲ್ಲ ಎಂದು ಹೇಳಿದರು.

ಶಾಸಕರು ಮಂತ್ರಿ ಪದವಿ ಕೊಡಲಿಲ್ಲ ಎಂದು ನನ್ನ ಬಳಿ ಸಿಡಿ ಇದೆ ಎಂದು ಬೆದರಿಕೆ ಒಡ್ಡುವುದು ಸರಿಯಲ್ಲ. ಶಾಸಕರಾದವರು ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕು. ಬೈಗುಳದ ಭಾಷೆ ಬಿಟ್ಟು ಕನ್ನಡ ಭಾಷೆಯನ್ನು ಸುಸಂಸ್ಕೃತವಾಗಿ ಬಳಸಿ, ಬೆಳೆಸಬೇಕು. ಮತದಾರರು ಇವರು ನಮ್ಮ ಶಾಸಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ಮಾತನಾಡಬೇಕು ಎಂದು ಹೇಳಿದರು.

ಮಠಾಧಿಪತಿಗಳು ತಮ್ಮ ಸಮುದಾಯಕ್ಕೆ ಸೇರಿದವರನ್ನು ಸಚಿವರನ್ನಾಗಿ ಮಾಡಬೇಕು, ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಗಡುವು ನೀಡುತ್ತಿದ್ದಾರೆ.ಜನರಿಗೆ ಧರ್ಮ, ತಿಳಿವಳಿಕೆ ನೀಡಬೇ ಕಾದಮಠಾಧಿಪತಿಗಳು ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ರಾಜಕೀಯ, ಧಾರ್ಮಿಕ, ನ್ಯಾಯಾಂಗ ಎಲ್ಲಾ ದೃಷ್ಟಿಯಿಂದಲೂ ಸಾಹಿತ್ಯ ಮುಂಚೂಣಿಗೆ ಬರಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿ ಕೂರದೆ ಜೀವಪರ ಕಾಳಜಿ, ಸಮಾಜವನ್ನು ಬಿಂಬಿಸುವ ಸಾಹಿತ್ಯ ಹೊರಬರಬೇಕು ಎಂದು ಹೇಳಿದರು.

ಸಾಹಿತ್ಯ ಆತ್ಮ ಸ್ಥೈರ್ಯ ತುಂಬಬೇಕು. ನಮಗೆ ಶಕ್ತಿ, ವಿಶ್ವಾಸ ಎಲ್ಲವನ್ನೂ ಗೆಲ್ಲಬಲ್ಲೆ, ಕಷ್ಟ ಕಾಲದಲ್ಲಿ ಬದುಕು ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಬೇಕು. ಸಾಹಿತ್ಯ ಎಂದರೆ ದಂತಗೋಪುರದಲ್ಲಿ ಕುಳಿತು ಮಾಡುವ ಕೆಲಸವಲ್ಲ. ಸಾಹಿತ್ಯ ಮುಗಿಲ ಮಲ್ಲಿಗೆ ಆಗಬಾರದು. ಸಾಹಿತ್ಯ ಜನರ ಜೀವನವನ್ನು ನೋಡುವ ಬದ್ಧತೆಯಿಂದ ಇರುವ ಬರವಣಿಗೆಯಾಗಿ ಇರಬೇಕು. ಸಾಹಿತ್ಯ ಜೀವನದ ಒಂದು ಪ್ರತಿಬಿಂಬ, ಗತಿಬಿಂಬ ಆಗಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ರಾಷ್ಟ್ರ ಧ್ವಜಾರೋಹಣ, ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರು ನಾಡ ಧ್ವಜಾರೋಹಣ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಚಾಮಲಾಪುರ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ಮಧುಸೂದನ ಮದ್ದೂರು ಅವರ ‘ನೇಮ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು. ಸಮ್ಮೇಳನದ ಮಹತ್ವದ ಕುರಿತು ಸಾಹಿತಿ ಪ್ರದೀಪ್‌ ಕುಮಾರ್‌ ಹೆಬ್ರಿ ಮಾತನಾಡಿದರು.

ನವೋದಯ ಸಾಹಿತ್ಯಕ್ಕೆ ಮಂಡ್ಯ ತಾಲ್ಲೂಕಿನ ಸಾಹಿತಿಗಳ ಕೊಡುಗೆ ಕುರಿತು ಉಪನ್ಯಾಸಕ ಬೆಕ್ಕಳಲೆ ಲೋಕೇಶ್‌ ವಿಷಯ ಮಂಡಿಸಿದರು. ವಿವಿಧ ಕವಿಗಳು ತಮ್ಮ ಕವನ ವಾಚಿಸಿದರು.

ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಸ್ವಾಗತ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಕಸಾಪ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಚ್‌.ಎನ್‌.ಯೋಗೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಸುಂಡಹಳ್ಳಿ ಮಹೇಶ್‌, ಸಹಾಯಕ ಪ್ರಾಧ್ಯಾಪಕ ಎಂ.ಬಿ.ಸುರೇಶ, ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಚಿದಂಬರ್‌ ಇದ್ದರು.

ನಾನು ಟಿ ಪಾರ್ಟಿಗೆ ಸೇರಿದವ...
‌ಹಂ.ಪ.ನಾಗರಾಜಯ್ಯ ಅವರು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಮಾತನಾಡುತ್ತಾ ‘ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಟಿ ಪಾರ್ಟಿಗೆ ಸೇರಿದವ’ ಎಂದರು.

‘ನಾನು ಪಕ್ಷಗಳ ಅತೀತವಾಗಿ ದೂರ ನಿಂತು ತಟಸ್ಥ ಭೂಮಿಕೆಯಲ್ಲಿ ನಿಂತು ಸಮಾಜದ ಚಲನವಲಗಳನ್ನು ಸಮೀಕ್ಷಿಸುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದೇನೆ’ ಎಂದು ಹೇಳಿದರು.

ನಾಮ ಫಲಕದಲ್ಲಿನ ತಪ್ಪು ಸರಿಪಡಿಸಿ
ಮಂಡ್ಯ ಎಂದರೆ ಅಚ್ಚ, ಸ್ವಚ್ಛ ಕನ್ನಡ, ಹೆಚ್ಚು ಜನರು ಕನ್ನಡ ಮಾತನಾಡುವವರು ಇರುವ ಜಿಲ್ಲೆ ಎನ್ನುತ್ತಾರೆ. ದುರಂತ ಎಂದರೆ ಮೈಸೂರು ಹೆದ್ದಾರಿಯಲ್ಲಿನ ನಾಮಫಲಕದಲ್ಲಿ ‘ರಸ್ತೆ ಉಬ್ಬು ಇದೆ ನಿಧನವಾಗಿ ಚಲಿಸಿ’ ಎಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮ್ಮೇಳನಾಧ್ಯಕ್ಷತೆ ವಹಿಸಿದ ಎಂ.ವಿ.ಧರಣೇಂದ್ರಯ್ಯ ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ನೌಕರರೊಬ್ಬರು ನಾವು ನೋಡಿಲ್ಲ. ಗಮನಿಸುತ್ತೇವೆ ಎಂದು ಹೇಳಿದರು. ಒಂದು ವಾರದ ನಂತರ ಕರೆ ಮಾಡಿ ಇದು ನಮ್ಮ ಕೆಲಸ ಅಲ್ಲ. ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸ ಎಂದು ಕೈ ತೊಳೆದುಕೊಂಡರು. ಇಲ್ಲಿಯವರೆಗೂ ನಾಮಫಲಕ ಹಾಗೇ ಇದ್ದು, ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ಸಂಘ, ಕನ್ನಡಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದವರು ಈ ನಾಮ ಫಲಕವನ್ನು ಗಮನಿಸಿಲ್ಲವೇ? ಕೂಡಲೇ ಅದನ್ನು ‘ನಿಧಾನವಾಗಿ’ ಎಂದು ಬರೆಸಿ ಕನ್ನಡದ, ಮಂಡ್ಯದ ಗೌರವವನ್ನು ಕಾಪಾಡಬೇಕು ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಆರಂಭಿಸಿ: ಒತ್ತಾಯ
ಮೈಷುಗರ್‌ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ, ಪ್ರಜಾಪ್ರಭುತ್ವೀಕರಣಗೊಳಿಸಬೇಕು. ಅಧಿಕಾರಶಾಹಿ ನಿಯಂತ್ರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಸಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು.

‘ಮೈಷುಗರ್‌ ಅಳಿವು–ಉಳಿವು’ ಕುರಿತು ಮಾತನಾಡಿದ ಅವರು, 75 ವರ್ಷಗಳ ಕಾಲ ಲಾಭದಲ್ಲಿ ನಡೆದ ಕಾರ್ಖಾನೆ ಕಳೆದ 10 ವರ್ಷಗಳಿಂದ ನಷ್ಟದ ಹಾದಿಯಲ್ಲಿ ಸಾಗಿದೆ. 80ನೇ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಲಿರುವ ವರದಿಯ ಪ್ರಕಾರ ಒಂದು ಮಿಲ್‌ ಮತ್ತು ಕೋಜನ್‌ಘಟಕ ಸುಸ್ಥಿತಿಯಲ್ಲಿದ್ದು, ಯಾವಾಗ ಬೇಕಾದರೂ ಅರೆಯಬಹುದು ಎಂದಿದೆ. ಆದರೆ, ಖಾಸಗಿಕರಣ ಮಾಡಲು ಸರ್ಕಾರ ಮುಂದಾಗಿರುವ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಧುನಿಕ ಮೈಸೂರು ಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ. ಮೈಷುಗರ್‌ ಕಾರ್ಖಾನೆಯನ್ನು ಉಳಿಸಿಕೊಳ್ಳಲುಇಡುವ ಒಂದೊಂದು ಹೆಜ್ಜೆಯೂ ನಾಲ್ವಡಿ ಅವರಿಗೆ ಸಲ್ಲಿಸುವ ಗೌರವವಾಗಿದೆ. ಸ್ವಾವಲಂಬನೆ, ಸ್ವಾಭಿಮಾನದ ದಿಟ್ಟ ಹೆಜ್ಜೆ ಮಾದರಿ ಮೈಸೂರು ಕಲ್ಪನೆಯಲ್ಲಿ ಮಂಡ್ಯ ರೈತರ ಬದುಕು ಅರಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.