ಮಂಡ್ಯ: ‘ನಾಗಮಂಗಲ ಪಟ್ಟಣ ಶಾಂತವಾಗಿದ್ದು, ತಣ್ಣಗಿರುವ ವಿಷಯವನ್ನು ಕೆಲವರು ದಿನವೂ ಕೆದಕುತ್ತಿದ್ದಾರೆ. ಘರ್ಷಣೆಗೆ ಜೆಡಿಎಸ್‌ನ ಕೆಲವರು ಕುಮ್ಮಕ್ಕು ಕೊಡಲು ನಿಂತಿದ್ದಾರೆ. ಅವರ ತಾಳಕ್ಕೆ ಸಂಸದರು ಸ್ಪಂದಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಮೊದಲು ಕೆರಗೋಡು ಗ್ರಾಮದಲ್ಲಿ ಶುರು ಮಾಡಿದರು. ಕೆ.ಆರ್.ಪೇಟೆ, ಪಾಂಡವಪುರದಲ್ಲಿ ಪ್ರಯತ್ನ ಮಾಡಿದರು. ಅದ್ಯಾವುದರಲ್ಲೂ ಯಶಸ್ಸು ಕಾಣಲಿಲ್ಲ. ಈಗ ಕೇಂದ್ರ ಸಚಿವರು ನಾಗಮಂಗಲಕ್ಕೆ ಪದೇ ಪದೇ ಬರುತ್ತಿದ್ದಾರೆ. ಇದರಿಂದ ಏನು ಪ್ರಯೋಜನ ಎಂದು ಕುಟುಕಿದರು.
‘ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡುತ್ತೇವೆ. ಬಂಧಿತರಿಗೆ ಜಾಮೀನು ಕೊಡಿಸುವ ಕೆಲಸವನ್ನು ನಮ್ಮ ಹುಡುಗರು ಮಾಡುತ್ತಿದ್ದಾರೆ. ಮತ್ತೆ ಯಾರನ್ನೂ ಬಂಧಿಸಿಲ್ಲ. ನಾಗಮಂಗಲದಲ್ಲಿ ಹಿಂದೂ ಮತ್ತು ಮುಸ್ಲಿಂ ಒಗ್ಗಟ್ಟಿನಿಂದ ಇದ್ದಾರೆ. ಶಾಂತಿ ಸಭೆ ಇದೆ. ಇಂಥ ಸಂದರ್ಭದಲ್ಲಿ ಭೇಟಿ ಕೊಡುವುದು ಸರಿಯಲ್ಲ. ಆದರೆ, ಸಂಸದರನ್ನು ಬರಬೇಡಿ ಅನ್ನಲು ಸಾಧ್ಯವೇ? ಎಂದರು.
ಮಾಜಿ ಶಾಸಕರಿಗೆ ನೋಟಿಸ್:
ನಾಗಮಂಗಲ ಗಲಭೆಯಲ್ಲಿ ಬಾಂಗ್ಲಾದೇಶದವರು ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಈ ಸಂಬಂಧ ಎಸ್ಪಿ ಅವರಿಗೆ ಹೇಳಿದ್ದೇನೆ. ಆ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಸುರೇಶ್‌ಗೌಡ ಅವರಿಗೆ ನೋಟಿಸ್ ಕೊಟ್ಟು, ವಿವರಣೆ ಕೇಳಲು ಹೇಳಿದ್ದೇನೆ. ಬಾಂಗ್ಲಾದೇಶದಿಂದ ಬಂದಿದ್ದಾರೆ ಎಂದರೆ ಅದು ಕೇಂದ್ರ ಸರ್ಕಾರದ ವೈಫಲ್ಯ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಂತ್ರಿ ಕುಮಾರಸ್ವಾಮಿ ಉತ್ತರ ಕೊಡಬೇಕಾಗುತ್ತದೆ ಎಂದರು.
‘ಸಿಎಂ ಅವರನ್ನು ಹಿಟ್ಲರ್’ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೇಂದ್ರ ಸಚಿವೆ ತೂಕವಾಗಿ ಮಾತನಾಡಬೇಕು. ಅವರಿಗೆ ನಾವು ಉತ್ತರ ಕೊಡಬಹುದು, ಕೊಟ್ಟರೆ ನಮ್ಮ ವ್ಯಕ್ತಿತ್ವ ಹಾಳಾಗುತ್ತದೆ. ಶೋಭಾ, ಆರ್.ಅಶೋಕ್‌ಗೆ ಬೇಕಿರುವುದು ಸಾರ್ವಜನಿಕರ ಹಿತ, ಶಾಂತಿ ಅಲ್ಲ. ಆದ್ದರಿಂದ ಅವರ ಬಗ್ಗೆ ಮಾತಾನಾಡುವುದಕ್ಕೆ ಹೋಗಬಾರದು ಎಂದರು.
ಕೊಲೆ ಆರೋಪಿಗೆ ಶ್ರೀರಂಗಪಟ್ಟಣ ಕಸಾಪ ಅಧ್ಯಕ್ಷ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೇಂದ್ರ ಗೃಹ ಸಚಿವ ಅಮಿತ್ ಷಾ, ಪ್ರಧಾನಮಂತ್ರಿ ಮೋದಿ, ನನ್ನ ಮೇಲೂ ಕೇಸ್ ಇದೆ. ಏನು ಮಾಡಬೇಕು?. ಇದು ರಾಜಕೀಯವಾಗಿ ಪ್ರಚೋದನೆ ಮಾಡುತ್ತಿರುವ ವಿಚಾರವಾಗಿದೆ. ಪ್ರಕರಣ ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ವರದಿ ಕೇಳಿದ್ದೇನೆ:
ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೇಳಿದ್ದೇನೆ. ಇದುವರೆಗೂ ಯಾವುದೇ ದೂರು ಬಂದಿರಲಿಲ್ಲ. ಆದರೆ ಸಾರ್ವಜನಿಕರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡದೇ ಕ್ರಮವಾಗಲಿದೆ. ಈ ಸಂಬಂಧ ಎಸ್ಪಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.