ADVERTISEMENT

ಮಂಡ್ಯ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 75 ಬಾಲಕಾರ್ಮಿಕರು ಪತ್ತೆ

ಮಂಡ್ಯ ಜಿಲ್ಲೆಯಲ್ಲಿ 72 ಪ್ರಕರಣ ದಾಖಲು: ₹3.37 ಲಕ್ಷ ದಂಡ ವಸೂಲಿ

ಸಿದ್ದು ಆರ್.ಜಿ.ಹಳ್ಳಿ
Published 14 ಜೂನ್ 2024, 6:59 IST
Last Updated 14 ಜೂನ್ 2024, 6:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 75 ಬಾಲಕಾರ್ಮಿಕರು ಪತ್ತೆಯಾಗಿದ್ದು, ಸಾಮಾಜಿಕ ಪಿಡುಗಾದ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಆಟ–ಪಾಠಗಳಲ್ಲಿ ನಲಿಯಬೇಕಾದ ಮಕ್ಕಳನ್ನು ದುಡಿಮೆಗೆ ದೂಡಿದವರ ವಿರುದ್ಧ 72 ಪ್ರಕರಣಗಳನ್ನು ದಾಖಲಿಸಿ, ₹3.37 ಲಕ್ಷ ದಂಡ ವಸೂಲಿ ಮಾಡಲಾಗಿದೆ. 

ಗ್ಯಾರೇಜ್‌, ಬೇಕರಿ, ಅಂಗಡಿ, ಹೋಟೆಲ್‌, ಪೆಟ್ರೋಲ್‌ ಬಂಕ್‌ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ, ಶಾಲೆಗಳಿಗೆ ಸೇರಿಸಲಾಗಿದೆ. ಕೆಲಸ ನೀಡಿದ್ದ ಮಾಲೀಕರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿ, ಪ್ರಕರಣ ದಾಖಲಿಸಿದ್ದಾರೆ. 

ADVERTISEMENT

ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಸಮಸ್ಯೆಯಾಗಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ. ಬಾಲ್ಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲು ಮತ್ತು 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. 

ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಾದ್ಯಂತ ನೂರಾರು ಜಾಗೃತಿ ಕಾರ್ಯಕ್ರಮ, ಭಿತ್ತಿ ಪತ್ರ, ಜಾಥಾ, ಬೀದಿ ನಾಟಕ ಆಯೋಜಿಸಿದ್ದರೂ ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾವಂತರೇ ಮಕ್ಕಳನ್ನು ದುಡಿಮೆಗೆ ದೂಡುತ್ತಿರುವುದು ಆತಂಕಕರಿ ಬೆಳವಣಿಗೆ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

ಪ್ರಕರಣಗಳ ಹೆಚ್ಚಳ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲಕಾರ್ಮಿಕ ಪ್ರಕರಣಗಳು ಹೆಚ್ಚಳವಾಗುತ್ತಿವೆ. 2019–20ರಲ್ಲಿ 1 ಪ್ರಕರಣ, 2020–21ರಲ್ಲಿ 21, 2021–22ರಲ್ಲಿ 33, 2022–23ರಲ್ಲಿ 10, 2023–24ರಲ್ಲಿ 22 ಪ್ರಕರಣಗಳ ದಾಖಲಾಗಿವೆ. ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಬಾಲಕಾರ್ಮಿಕರು ಕಂಡ ತಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

‘ಅನಕ್ಷರತೆ, ಬಡತನ, ಸಾಮಾಜಿಕ ಪರಿಸ್ಥಿತಿ ಮುಂತಾದ ಕಾರಣಗಳಿಂದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೆಲವು ಪೋಷಕರು ಇದರ ಪ್ರಯೋಜನ ಪಡೆಯುತ್ತಿಲ್ಲ. ಬಾಲ್ಯದಲ್ಲಿ ಮಕ್ಕಳ ಕಲಿಕಾ ಶಕ್ತಿ ಹೆಚ್ಚಿರುತ್ತದೆ. ಅವರಿಗೆ ಉತ್ತಮ ಕೌಶಲ, ಜ್ಞಾನ ಮತ್ತು ಶಿಕ್ಷಣ ನೀಡಿ, ಉತ್ತಮ ಭವಿಷ್ಯ ರೂಪಿಸಬೇಕು’ ಎನ್ನುತ್ತಾರೆ ಶಿಕ್ಷಕರು. 

ಪತ್ತೆ ಕಾರ್ಯ ಕಷ್ಟ

'ಕೆಲವು ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ದುಡಿಮೆಗೆ ಹೋಗುತ್ತಿದ್ದಾರೆ. ಇದರಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತದೆ ಎಂಬುದು ಪೋಷಕರ ವಾದ. ಆದರೆ, ಎಳೆಯ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಕೆಲವು ಕಡೆ ದುಡಿಮೆ ಮಾಡುವ ಮಕ್ಕಳನ್ನು ಪತ್ತೆ ಹಚ್ಚಿದರೂ ಇವರು ನಮ್ಮ ಮಕ್ಕಳು, ಸಂಬಂಧಿಕರ ಮಕ್ಕಳು ಎಂದು ಮಾಲೀಕರು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಎಲ್ಲ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ' ಎಂದು ಅಧಿಕಾರಿಯೊಬ್ಬರು ಹೇಳಿದರು.

ಬಾಲಕಾರ್ಮಿಕರು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಂಡ್ಯ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 1887 ಸಂಸ್ಥೆಗಳ ತಪಾಸಣೆ ನಡೆಸಲಾಗಿದೆ

–ಚೇತನಕುಮಾರ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.