ಮಂಡ್ಯ: ‘ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದ್ದು ಮಕ್ಕಳ ಹಕ್ಕು ರಕ್ಷಿಸುವ ಕೆಲಸ ನಡೆಯುತ್ತಿಲ್ಲ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆಂತೋಣಿ ಸೆಬಾಸ್ಟಿಯನ್ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಬಾಲ್ಯವಿವಾಹಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿವೆ. ಬಾಲ್ಯವಿವಾಹ ತಡೆ ಅಧಿಕಾರವನ್ನು ಶಾಲಾ ಶಿಕ್ಷಕರು ಸೇರಿ ಹಲವರಿಗೆ ನೀಡಲಾಗಿದ್ದೂ ಬಾಲ್ಯ ವಿವಾಹ ಕಡಿಮೆಯಾಗಿಲ್ಲ. ಒಂದು ಇಲಾಖೆಯ ಅಧಿಕಾರಿಗಳು ಇನ್ನೊಂದು ಇಲಾಖೆಯ ಮೇಲೆ ದೂರು ಹೇಳುತ್ತಿದ್ದಾರೆ. ಎಲ್ಲರ ನಡುವೆ ಸಂವಹನ, ಸಮನ್ವಯತೆಯ ಕೊರತೆ ಇದೆ. ಅಧಿಕಾರಿಗಳು ಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಒಂದೇ ಹಳ್ಳಿಯಲ್ಲಿ 15ಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಅದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬಾಲ್ಯ ವಿವಾಹ ನಡೆದ ನಂತರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಮಕ್ಕಳ ವಿಶೇಷ ಪೊಲೀಸ್ ಘಟಕ (ಎಸ್‌ಜೆಪಿಯು) ವಿಫಲವಾಗಿದೆ. ಪೊಲೀಸರ ಅಂಕಿ–ಅಂಶಗಳಿಗೂ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಅಂಕಿ–ಅಂಶಗಳಿಗೂ ಹೋಲಿಕೆಯಾಗುತ್ತಿಲ್ಲ’ ಎಂದರು.
‘ಗ್ರಾಮವೊಂದರಲ್ಲೇ 10ಕ್ಕೂ ಹೆಚ್ಚು ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಆದರೆ ಕಾರ್ಮಿಕ ಇಲಾಖೆ ಮಾಹಿತಿ ಅನ್ವಯ ಮಂಡ್ಯ ಜಿಲ್ಲೆಯಲ್ಲಿ ಕೇವಲ 5 ಮಂದಿ ಬಾಲ ಕಾರ್ಮಿಕರನ್ನು ಗುರುತಿಸಲಾಗಿದೆ. ಇದು ಅತ್ಯಂತ ತಪ್ಪು ಹಾಗೂ ನಿರ್ಲಕ್ಷ್ಯದಿಂದ ನೀಡಿದ ಉತ್ತರವಾಗಿದೆ. ಅವರ ಮಾಹಿತಿ ಅನ್ವಯ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಿಸಬಹುದೇ? ತಿಂಗಳೊಳಗೆ ಮರು ಸಮೀಕ್ಷೆ ನಡೆಸಿ ಆಯೋಗಕ್ಕೆ ವರದಿ ನೀಡಬೇಕು’ ಎಂದು ಸೂಚಿಸಿದರು.
ಆಯೋಗದ ಸದಸ್ಯ ಅಶೋಕ್ ಯರಗಟ್ಟಿ ಮಾತನಾಡಿ ‘ಬೀದಿಯಲ್ಲಿ ಓಡಾಡುವ ಸಾಮಾನ್ಯ ವ್ಯಕ್ತಿಗೂ ಬಾಲಕಾರ್ಮಿಕರು ಕಾಣುತ್ತಾರೆ. ರಸ್ತೆಯಲ್ಲಿ, ಗ್ಯಾರೇಜ್‌ಗಳಲ್ಲಿ, ಕಾರ್ಖಾನೆಗಳಲ್ಲಿ ಕಾಣುತ್ತಾರೆ. ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಣ್ಣಿಗೆ ಮಾತ್ರ ಬಾಲ ಕಾರ್ಮಿಕರು ಕಾಣದೇ ಇರುವುದು ಅತ್ಯಂತ ನೋವಿನ ವಿಚಾರವಾಗಿದೆ’ ಎಂದರು.
ಸದಸ್ಯ ರಾಘವೇಂದ್ರ ಮಾತನಾಡಿ ‘ಜಿಲ್ಲೆಯಲ್ಲಿ 235 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 35 ಪಂಚಾಯಿತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳು ನಡೆದಿವೆ. ಶೇ 10ರಷ್ಟು ಸಾಧನೆ ಮಾಡಲಾಗಿದೆ. ಇದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ವೈಫಲ್ಯವಾಗಿದೆ. ಗ್ರಾಮ ಸಭೆಗಳು ನಡೆದರೆ ಮಾತ್ರ ಮಕ್ಕಳ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಲು ಸಾಧ್ಯ. ಸಭೆ ನಡೆಸದ ಮೂಲಕ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ’ ಎಂದು ಆರೋಪಿಸಿದರು.
‘ಕೋವಿಡ್ ಸಮಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಓದು ಬೆಳಗು ಕಾರ್ಯಕ್ರಮವನ್ನು ಯಾವ ಗ್ರಾಮ ಪಂಚಾಯಿತಿಯೂ ಮಾಡಿಲ್ಲ. ಇದರಲ್ಲಿ ಪಿಡಿಒಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದರು.
ಮತ್ತೊಬ್ಬ ಸದಸ್ಯ ಶಂಕರಪ್ಪ ಮಾತನಾಡಿ ‘ಮಕ್ಕಳ ನ್ಯಾಯ ರಕ್ಷಣೆ ಮತ್ತು ಪೋಷಣೆ ಕಾಯ್ದೆಯ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದು ಕಂಡುಬರುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ನ್ಯಾಯ, ಪರಿಹಾರ ಸಿಗುತ್ತಿಲ್ಲ’ ಎಂದರು.
ಸದಸ್ಯ ಪರಶುರಾಂ ಮಾತನಾಡಿ ‘ಕೇವಲ ₹ 110 ಕದ್ದ ಎಂಬ ಕಾರಣಕ್ಕೆ ಕಳೆದ 8 ತಿಂಗಳುಗಳಿಂದ ಬಾಲಕನೊಬ್ಬನನ್ನು ಬಾಲಮಂಡಳಿಯಲ್ಲಿ ಇರಿಸಲಾಗಿದೆ. ಪ್ರಕರಣಗಳು ನಿಗದಿತ ಅವಧಿಯಲ್ಲಿ ಇತ್ಯರ್ಥವಾಗುತ್ತಿಲ್ಲ’ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವರದರಾಜು, ಜಿ.ಪಂ ಉಪ ಕಾರ್ಯದರ್ಶಿ ಎಂ.ಡಿ.ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ ಇದ್ದರು.
ತಪ್ಪು ಮಾಹಿತಿ: ಕ್ರಮದ ಎಚ್ಚರಿಕೆ
‘ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿ–ಅಂಶಗಳು ತಪ್ಪಾಗಿವೆ. ಅವುಗಳನ್ನು ಕೂಡಲೇ ಸರಿಪಡಿಸಿಕೊಳ್ಳದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಂತೋಣಿ ಸೆಬಾಸ್ಟಿಯನ್ ಎಚ್ಚರಿಸಿದರು.
‘ಬಹುತೇಕ ಅಧಿಕಾರಿಗಳು ಯಾವುದೇ ಮಾಹಿತಿ ಇಲ್ಲದೆ ಬಂದಿದ್ದಾರೆ. ಇನ್ನುಮುಂದೆ ಇಂತಹ ವರ್ತನೆಗಳನ್ನು ಆಯೋಗ ಸಹಿಸುವುದಿಲ್ಲ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದರು.
24 ಗಂಟೆಯೊಳಗೆ ಊಟ, ವಸತಿ
‘ಮದ್ದೂರು ತಾಲ್ಲೂಕು ಚಾಮನಹಳ್ಳಿ ಗ್ರಾಮದ ಕಬ್ಬು ಕಡಿಯುವ ಕಾರ್ಮಿಕರ ಕುಟುಂಬವೊಂದು ಊಟ, ನೀರು, ವಸತಿ ಇಲ್ಲದೆ ಪರಿತಪಿಸುತ್ತಿದೆ. ಕಳೆದ ತಿಂಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಂತೋಣಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, 24 ಗಂಟೆಯೊಳಗೆ ಅವರಿಗೆ ಊಟ, ವಸತಿ ಸೌಲಭ್ಯ ಒದಗಿಸಲಾಗುವುದು ಎಂದರು.
ಬಾಲಕಿ ಕುಟುಂಬಕ್ಕೆ 2 ಎಕರೆ ಜಮೀನು
ಆಯೋಗದ ಸದಸ್ಯ ಪರಶುರಾಂ ಮಾತನಾಡಿ ‘ಕೊಪ್ಪ ಸಮೀಪದ ಕಬ್ಬಿನ ಗದ್ದೆಯಲ್ಲಿ ಕೊಲೆಯಾದ ಬಳ್ಳಾರಿ ಜಿಲ್ಲೆಯ ಕಾರ್ಮಿಕ ಕುಟುಂಬದ ಬಾಲಕಿಗೆ ನ್ಯಾಯ ಸಿಗಬೇಕು. ಬಳ್ಳಾರಿ ಜಿಲ್ಲಾಧಿಕಾರಿಗಳು ಆ ಕುಟುಂಬ ಸದಸ್ಯರಿಗೆ 2 ಎಕರೆ ಭೂಮಿ ನೀಡಲು ಒಪ್ಪಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.