ADVERTISEMENT

ಮಳವಳ್ಳಿ: ಸ್ಮಶಾನದಲ್ಲಿ ‘ನನ್ನ ಲೈಫ್’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 12:19 IST
Last Updated 17 ಜೂನ್ 2023, 12:19 IST
ಮಳವಳ್ಳಿ ಪಟ್ಟಣದ ಕಪಡಿಮಾಳದ ಸ್ಮಶಾನದಲ್ಲಿ ಪುರಸಭೆ ವತಿಯಿಂದ ಶನಿವಾರ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಮಳವಳ್ಳಿ ಪಟ್ಟಣದ ಕಪಡಿಮಾಳದ ಸ್ಮಶಾನದಲ್ಲಿ ಪುರಸಭೆ ವತಿಯಿಂದ ಶನಿವಾರ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.   

ಮಳವಳ್ಳಿ: ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಅಭಿವೃದ್ಧಿ ಮತ್ತು ನಾಗರಿಕತೆಯ ಪ್ರತೀಕವಾಗಿದ್ದು, ಎಲ್ಲರೂ ಸ್ವಚ್ಛತೆಗೆ  ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಮಹದೇವ್ ಹೇಳಿದರು.

ಪಟ್ಟಣದ ಕಪಡಿಮಾಳದ ಸ್ಮಶಾನದಲ್ಲಿ ಪುರಸಭೆ ವತಿಯಿಂದ 'ನಮ್ಮ ನಡೆ ಸ್ವಚ್ಛತೆ ಕಡೆ, ನನ್ನ ಲೈಫ್ ನನ್ನ ನಗರ ಅಭಿಯಾನ’ದಡಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಆಂದೋಲನದ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವುದು ಉದ್ದೇಶವಾಗಿದೆ. ಪಟ್ಟಣದ ಅತಿದೊಡ್ಡ ಸ್ಮಶಾನವಾಗಿರುವ ಇಲ್ಲಿ ಗಿಡಗಂಟಿಗಳು ಬೆಳೆದು ತೊಂದರೆಯಾಗುತ್ತಿತ್ತು. ಎಲ್ಲವನ್ನೂ ತೆರವುಗೊಳಿಸಿ ಉತ್ತಮ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇತರೆಡೆಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮುಖಂಡ ದೊಡ್ಡಯ್ಯ ಮಾತನಾಡಿ, ಎಲ್ಲವನ್ನೂ ಅಧಿಕಾರಿಗಳೇ ಮಾಡಲು ಸಾಧ್ಯವುಲ್ಲ, ಸಾರ್ವಜನಿಕರೂ ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈಜೋಡಿ ಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸ್ವಚ್ಛತೆ ಮನೆಯಿಂದಲೇ ಆರಂಭಗೊಳ್ಳಬೇಕು.  ಪುರಸಭೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಎಂ.ಎನ್.ಶಿವಸ್ವಾಮಿ, ಎಂ.ಆರ್.ರಾಜಶೇಖರ್, ಪರಿಸರ ಎಂಜಿನಿಯರ್ ನಾಗೇಂದ್ರ, ಆರೋಗ್ಯ ನಿರೀಕ್ಷ ಪ್ರಕಾಶ್, ಮುಖಂಡರಾದ ರಮೇಶ್, ಪೊತ್ತಂಡೆ ನಾಗರಾಜು, ವೆಂಟಕೇಶ್, ಆಜಂ ಷರೀಫ್ ಇದ್ದರು.

‘ಸ್ಮಶಾನವೂ ಪವಿತ್ರ’

ಸ್ಮಶಾನಗಳು ಸಹ ಒಂದು ರೀತಿಯಲ್ಲಿ ದೇವಸ್ಥಾನಗಳಂತೆ ಅಲ್ಲೂ ಪವಿತ್ರತೆ ಅಡಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನರು ಸ್ಮಶಾನದಲ್ಲಿ ಮದ್ಯಪಾನ ಅಂಥ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಖಾಲಿ ಬಾಟಲಿನ ಗಾಜಿನ ಚೂರುಗಳು ಅಂತ್ಯಸಂಸ್ಕಾರದ ವೇಳೆ ಬರುವ ಜನರಿಗೆ ಅಪಾಯ ತರಬಹುದು. ಹೀಗಾಗಿ ಇಂಥ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಬೇಕು. ಪುರಸಭೆಯಿಂದಲೂ ಪೊಲೀಸ್ ಇಲಾಖೆಗೆ ಪತ್ರ ಬರೆದು ಕ್ರಮ ವಹಿಸುವಂತೆ ಮನವಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಮಹದೇವ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.