ಮಂಡ್ಯ: ಬಿಸಿಲಿನ ತಾಪಕ್ಕೆ ಜನ– ಜಾನುವಾರು ಬಸವಳಿಯುತ್ತಿದ್ದು, ನೀರಿನ ಕೊರತೆಯಿಂದ ತೆಂಗಿನ ಮರಗಳೂ ಬತ್ತಿ ಬೆಂಡಾಗಿ, ಗರಿಗಳು ಕಳಚಿ ಬೀಳುತ್ತಿವೆ. ರೈತರು ಕಂಗಾಲಾಗಿದ್ದಾರೆ.
ಹೊಂಬಾಳೆ ಬಿಟ್ಟು, ಕಾಯಿ ಕಟ್ಟಿ ಫಲ ಕೊಡುವ ಮೊದಲೇ ಮರಗಳು ಒಣಗುತ್ತಿವೆ. ಕೊಳವೆ ಬಾವಿಗಳೂ ಬತ್ತಿರುವುದರಿಂದ, ಅವನ್ನೇ ಆಶ್ರಯಿಸಿದ ಮರಗಳೂ ಬಸವಳಿದಿವೆ.
ಜಿಲ್ಲೆಯಲ್ಲಿ 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ತೆಂಗಿನ ಬೆಳೆಯನ್ನು ಮಳೆ ಮತ್ತು ನಾಲೆ ನೀರಿನ ಆಶ್ರಯದಲ್ಲಿ ಬೆಳೆಯಲಾಗಿದೆ. ನಾಲೆಗಳನ್ನು ಆಶ್ರಯಿಸಿದ ಮರಗಳೂ ತರಗೆಲೆಯಂತಾಗಿದ್ದು, ಗರಿಗಳೆಲ್ಲ ಒಣಗಿ ಕರಕಲಾಗಿವೆ.
ಜಿಲ್ಲೆಯ ರೈತರ ಆರ್ಥಿಕ ಶಕ್ತಿಗೆ ತೆಂಗಿನ ಮರಗಳೇ ಮೂಲ. ತೆಂಗಿನ ಕಾಯಿ, ಕೊಬ್ಬರಿ ಬೆಲೆ ಕಡಿಮೆ ಇದ್ದರೂ ಎಳನೀರಿನ ಬೆಲೆ ಉತ್ತಮವಾಗಿದೆ. ಏಷ್ಯಾ ಖಂಡದಲ್ಲಿಯೇ ದೊಡ್ಡ ‘ಎಳನೀರು ಮಾರುಕಟ್ಟೆ’ ಮದ್ದೂರಿನಲ್ಲಿದ್ದು, ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟ ಎದುರಾಗಿದೆ.
‘ಹಲವು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದಿದ್ದ ಮರಗಳು ಒಣಗುತ್ತಿವೆ. ಇಂಥ ಬಿಸಿಲ ತಾಪವನ್ನು ಹಿಂದೆಂದೂ ಕಂಡಿರಲಿಲ್ಲ. ಇಳುವರಿ ತೀವ್ರವಾಗಿ ಕುಸಿದಿದೆ. ಕೆಲವೆಡೆ ಸುಳಿಯೇ ಒಣಗಿ ಮರಗಳು ಬೀಳುತ್ತಿವೆ’ ಎಂದು ಮಂಗಲ ಗ್ರಾಮದ ರೈತ ಸಿ.ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
‘ಡಿಸೆಂಬರ್ ತಿಂಗಳಲ್ಲಿಯೇ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 93 ಅಡಿ ನೀರಿತ್ತು, ಆಗ ನೀರು ಕೊಟ್ಟಿದ್ದರೆ ಮರಗಳು ಉಸಿರಾಡುತ್ತಿದ್ದವು. ತೀವ್ರ ಬರದ ಜೊತೆಗೆ ನೀರು ಹರಿಸದೆ ಕೃತಕವಾದ ಹೆಚ್ಚುವರಿ ಬರವನ್ನೂ ಜನಪ್ರತಿನಿಧಿಗಳು ಕೊಟ್ಟಿದ್ದಾರೆ. ಮರಗಳು ನಾಶವಾದರೆ ರೈತರ ಬದುಕೇ ನಾಶವಾಗುತ್ತದೆ’ ಎಂದು ಮಾದರಹಳ್ಳಿ ಮರಿದೇಶಿಗೌಡ ಆತಂಕ ವ್ಯಕ್ತಪಡಿಸಿದರು.
‘ತೆಂಗಿನ ತೋಟಗಳಲ್ಲಿ ಬೀಳುತ್ತಿರುವ ರಾಶಿಗಟ್ಟಲೆ ಗರಿಗಳನ್ನು ನಿಭಾಯಿಸುವುದೇ ಸಾಹಸವಾಗಿದೆ. ಕೆಲವೆಡೆ ಗರಿಗಳನ್ನು ಸುಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಶೀಘ್ರ ತೆಂಗು ಬೆಳೆ ಹಾನಿಯನ್ನು ಅಂದಾಜು ಮಾಡಿ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಲಕೆರೆ ಗ್ರಾಮದ ರೈತರಾದ ಲೋಕೇಶ್ ಮಲ್ಲೇಶ್ ಮಹೇಶ್ ಒತ್ತಾಯಿಸಿದರು.
ಇನ್ನೆರಡು ವರ್ಷ ಬರ ಮುಂದುವರಿದರೆ ತೆಂಗು ಬೆಳೆ ಮಾಡಲೂ ಆಗದ ಸ್ಥಿತಿ ಬರಲಿದೆ. ಜೊತೆಗೆ ಇರುವ ಬೆಳೆಯೂ ನಾಶವಾಗುವ ಸಾಧ್ಯತೆ ಇದೆ-ಕೆ.ಎನ್.ರೂಪಶ್ರೀ, ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.