ನಾಗಮಂಗಲ: ಸಮೃದ್ಧವಾಗಿ ಫಲ ಬಿಡುತ್ತಿದ್ದ ತೆಂಗಿನ ಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಸಂಪೂರ್ಣವಾಗಿ ಆಹುತಿಯಾಗಿದೆ.
ತಾಲ್ಲೂಕಿನ ಹಾಲ್ತಿ ಗ್ರಾಮದ ರೈತ ಡಿ.ಆರ್.ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ್ದ ಕೆಂದನಹಳ್ಳಿ ಸರ್ವೇ ನಂಬರ್‌ನಲ್ಲಿದ್ದ ತೆಂಗಿನ ತೋಟಕ್ಕೆ ಭಾನುವಾರ ಬೆಳಿಗ್ಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ತೋಟದ ಮಾಲೀಕರಿಗೆ ಬೆಂಕಿ ಬಿದ್ದಿರುವ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ 48 ಮರಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ರೈತನಿಗೆ ಅಪಾರ ನಷ್ಟ ಉಂಟಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಮೀನಾಕ್ಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಹೊಟ್ಟೆಕಿಚ್ಚಿನಿಂದ ತೋಟಕ್ಕೆ ಬೆಂಕಿ ಹಾಕಿದ್ದು, ಸುಮಾರು 18 ವರ್ಷದ 48 ತೆಂಗಿನಮರಗಳು ಬೆಂಕಿಗೆ ಸುಟ್ಟು ಹೋಗಿವೆ. ಅಲ್ಲದೇ ಈ ತೋಟವು ಜೀವನಾಧಾರವಾಗಿದ್ದು, ಪ್ರತಿ ವರ್ಷವೂ ₹3 ಲಕ್ಷ ಆದಾಯ ಬರುತ್ತಿತ್ತು. ಕಳೆದ ಎರಡು ಮೂರು ತಿಂಗಳ ಹಿಂದೆ ಕೊಳವೆ ಬಾವಿಯೂ ಬತ್ತಿಹೋಗಿದ್ದು, ತೋಟಕ್ಕೆ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಸ್ವಲ್ಪ ಕಳೆಯು ಒಣಗಿದ್ದು, ಬೆಂಕಿ ಆವರಿಸಿ ತೋಟಕ್ಕೆ ಹಾನಿಯಾಗಿದ್ದು, ದಿಕ್ಕು ತೋಚದಂತಾಗಿದೆ’ ಎಂದು ತೋಟದ ಮಾಲೀಕ ಡಿ.ಆರ್.ಮಲ್ಲಿಕಾರ್ಜುನ ಅವರು ಕಣ್ಣೀರಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.