ADVERTISEMENT

ಮಂಡ್ಯ: ಗಡಗಡ ನಡುಗಿಸುತ್ತಿದೆ ಚಳಿ, ಉದ್ಯಾನ ಖಾಲಿ

ಮೈಕೊರೆಯುತ್ತಿದೆ ಶೀತ ಗಾಳಿ; 14.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ಕನಿಷ್ಠ ಉಷ್ಣಾಂಶ

ಎಂ.ಎನ್.ಯೋಗೇಶ್‌
Published 20 ಡಿಸೆಂಬರ್ 2021, 19:30 IST
Last Updated 20 ಡಿಸೆಂಬರ್ 2021, 19:30 IST
ಮೇಲುಕೋಟೆಯಲ್ಲಿ ಸೋಮವಾರ ಬೆಳಿಗ್ಗೆ ಕಂಡು ಬಂದ ಮಂಜು ಮುಸುಕಿದ ವಾತಾವರಣ
ಮೇಲುಕೋಟೆಯಲ್ಲಿ ಸೋಮವಾರ ಬೆಳಿಗ್ಗೆ ಕಂಡು ಬಂದ ಮಂಜು ಮುಸುಕಿದ ವಾತಾವರಣ   

ಮಂಡ್ಯ: ಕಳೆದೆರಡು ದಿನಗಳಿಂದ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಮೈಕೊರೆಯುವ ಚಳಿಗೆ ಜನರು ಗಡಗಡ ನಡುಗುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಕಚಗುಳಿ ಇಡುತ್ತಿದ್ದು ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಿದ್ದಾರೆ.

ಬೆಳಿಗ್ಗೆ 9 ಗಂಟೆಯಾದರೂ ಚಳಿ ಕಾಡುತ್ತಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸವಾಲಾಗಿದೆ. ಬದಲಾದ ವಾತಾವರಣದಿಂದ ಮಕ್ಕಳ ಆರೋಗ್ಯ ಕಾಪಾಡಲು ಪೋಷಕರು ಪರದಾಡುತ್ತಿದ್ದಾರೆ. ಚಳಿ ಆರಂಭವಾದ ನಂತರ ಶಾಲೆಯಲ್ಲಿ ಹಾಜರಾತಿ ಕೊಂಚ ಕಡಿಮೆಯಾಗಿದೆ. ಸ್ವೆಟರ್‌, ಮಫ್ಲರ್‌ ಧರಿಸಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಮಕ್ಕಳಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು ಮಕ್ಕಳಾಸ್ಪತ್ರೆಗಳು, ಕ್ಲಿನಿಕ್‌ಗಳು ತುಂಬಿ ಹೋಗಿವೆ.

ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರು ಚಳಿಯಿಂದ ತಮ್ಮ ದೇಹ ರಕ್ಷಣೆ ಮಾಡಿಕೊಳ್ಳಲು ಪರದಾಡುವಂತಾಗಿದೆ. ಮನೆಯಿಂದ ಹೊರಗೆ ಬಾರದಷ್ಟು ಚಳಿ ಕಾಡುತ್ತಿದೆ. ನಿತ್ಯ ಉದ್ಯಾನ, ಕ್ರೀಡಾಂಗಣಗಳಲ್ಲಿ ವಿಹಾರ ಮಾಡುತ್ತಿದ್ದ ಜನರು ಈಗ ಆ ಕಡೆ ತಿರುಗಿ ನೋಡುತ್ತಿಲ್ಲ. ನಗರದ ಪಿಇಟಿ ಒಳಾಂಗಣದ ಕ್ರೀಡಾಂಗಣದ ಹೊರಾವರಣದಲ್ಲಿ ನಿತ್ಯ ನೂರಾರು ಜನರು ವಿಹಾರ ಮಾಡುತ್ತಿದ್ದರು. ಆದರೆ ಎರಡು ದಿನಗಳಿಂದ ವಾಕಿಂಗ್‌ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

ADVERTISEMENT

ಜಿಲ್ಲಾ ಕ್ರೀಡಾಂಗಣದಲ್ಲಿ ನಸುಕಿನ 5 ಗಂಟೆಯಿಂದಲೇ ವಿಹಾರ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಕೋವಿಡ್‌ 2ನೇ ಅಲೆಯ ನಂತರ ವಿಹಾರ ಮಾಡುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿತ್ತು. ಮಂಡ್ಯ ವಿ.ವಿ ಆವರಣ, ಸುಭಾಷ್‌ ನಗರದ ದೇವರ ಕಾಡು, ಹನಿಯಂಬಾಡಿ ರಸ್ತೆಯಲ್ಲಿ ವಾಕ್‌ ಮಾಡುವವರಿಗೆ ಕೊರತೆ ಇರಲಿಲ್ಲ. ಆದರೆ ವಿಪರೀತ ಚಳಿಯಿಂದಾಗಿ ಉದ್ಯಾನಗಳು ಖಾಲಿಯಾಗಿವೆ. ಉದ್ಯಾನ, ಕ್ರೀಡಾಂಗಣಗಳು ಖಾಲಿಯಾಗಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದ ಹಿಂಭಾಗದಲ್ಲಿರುವ ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್‌ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆಯಲ್ಲೂ ಕಡಿಮೆಯಾಗಿದೆ.

‘‍‍ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ನಂತರ ಯುವಜನರು ಜಿಮ್‌ಗಳಿಗಿಂತಲೂ ವಿಹಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಹೆಚ್ಚು ಯುವಜನರು ವಿಹಾರ ಮಾಡುತ್ತಿದ್ದರು. ಹೆಚ್ಚು ಚಳಿ ಇರುವ ಕಾರಣ ಕ್ರೀಡಾಂಗಣದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿದೆ. ಸಂಜೆ ಕೂಡ ಇದೇ ಪರಿಸ್ಥಿತಿ ಇದೆ’ ಎಂದು ಚಳಿಯ ನಡುವೆಯೂ ನಿರಂತರವಾಗಿ ವಿಹಾರ ಮುಂದುವರಿಸಿರುವ ಸುಭಾಷ್‌ ನಗರದ ವಿಜಯ್‌ಕುಮಾರ್‌ ತಿಳಿಸಿದರು.

ಕುಸಿದ ಉಷ್ಣಾಂಶ: ಹವಾಮಾನ ಇಲಾಖೆ ಮಾಹಿತಿ ಅನ್ವಯ ಅಂದಾಜು ಕನಿಷ್ಠ ಉಷ್ಣಾಂಶ ಕೆಳೆದರಡು ದಿನಗಳಿಂದ 16 ಡಿಗ್ರಿ ಸೆಲ್ಸಯಸ್‌ ನಿಗದಿಯಾಗಿತ್ತು. ಆದರೆ ವಾಸ್ತವಾಗಿ 14.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದ್ದು ಚಳಿ ವಿಪರೀತವಾಗಿದೆ. ಕಳೆದ ವರ್ಷ ನವೆಂಬರ್‌ 11ರಂದು ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ಬಾರಿ ಹೆಚ್ಚು ಮಳೆಯಿಂದಾಗಿ ಚಳಿ ಡಿಸೆಂಬರ್‌ವರೆಗೂ ಚಳಿ ಕಾಡುತ್ತಿದೆ.

ಶೀತ ಗಾಳಿ ಎಲ್ಲೆಡೆ ಬೀಸುತ್ತಿರುವ ಕಾರಣ ಜನರು ಮನೆಯಿಂದ ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಐದು ದಿನಗಳಿಗೂ ಕನಿಷ್ಠ ಅಂದಾಜು ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಆದರೆ ವಾಸ್ತವ ಉಷ್ಣಾಂಶ ಕುಸಿಯುವ ಮುನ್ಸೂಚನೆ ಇರುವ ಕಾರಣ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಕಾರಣ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ ತೇವಾಂಶ ವಾತಾವರಣ ಹೆಚ್ಚಳವಾಗಿದ್ದು ಚಳಿ ಮೈ ಕೊರೆಯುತ್ತಿದೆ. ಹಳ್ಳಿಗಳಲ್ಲಿ ಜನರು ಬೆಳಿಗ್ಗೆ ಎದ್ದೊಡನೆ ಬೆಂಕಿ ಹೊತ್ತಿಸಿಕೊಂಡು ಮೈ ಕಾಯಿಸಿಕೊಳ್ಳುತ್ತಾ ಚಳಿಯಿಂದ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯವೂ ತುಂಬಿರುವ ಕಾರಣ ನಾಲೆಗಳಲ್ಲೂ ನಿರಂತರವಾಗಿ ನೀರು ಹರಿಯುತ್ತಿದೆ, ಚಳಿ ಹೆಚ್ಚಳಕ್ಕೆ ಇದೂ ಕಾರಣವಾಗಿದೆ. ಚಳಿಯಿಂದಾಗಿ ಚಿಲ್ಲರೆ ಎಳನೀರು ಬೆಲೆ ₹ 25ಕ್ಕೆ ಕುಸಿದಿದೆ. ರೈತರಿಂದ ಖರೀದಿಸುವ ಎಳನೀರು ದರವೂ ₹ 10– 13ಕ್ಕೆ ಇಳಿದಿದೆ. ಬೇಸಿಗೆಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಎಳನೀರು ₹ 40ರವರೆಗೂ ಇತ್ತು, ಆದರೆ ಚಳಿಯಿಂದಾಗಿ ಬೆಲೆ ಕುಸಿದಿದೆ. ಐಸ್‌ಕ್ರೀಂ ಸೇರಿದಂತೆ ತಂಪು ಪಾನೀಯಗಳಿಗೆ ಬೇಡಿಕೆ ಇಲ್ಲವಾಗಿದೆ.

ಉತ್ತರ ಮಾರುಗಳ ಪ್ರಭಾವ

‘ಕಳೆದ ವರ್ಷಕ್ಕಿಂತ ಈ ಬಾರಿ ಚಳಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಆದರೆ ಮಳೆಗಾಲ ಈ ಬಾರಿ ಡಿಸೆಂಬರ್‌ವರೆಗೂ ವಿಸ್ತರಣೆಯಾಗಿದ್ದು ಇಲ್ಲಿಯವರೆಗೆ ಚಳಿ ಜನರ ಅರಿವಿಗೆ ಬಂದಿರಲಿಲ್ಲ. ಆದರೆ ಈಗ ಉಷ್ಣಾಂಶ ಕಡಿಮೆಯಾಗಿರುವ ಕಾರಣ ಜನರಿಗೆ ಚಳಿ ಅನುಭವನಕ್ಕೆ ಬಂದಿದ್ದು ವಿಪರೀತ ಎನಿಸಿದೆ’ ಎಂದು ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಹವಾಮಾನ ವಿಜ್ಞಾನದ ವಿಷಯ ತಜ್ಞರಾದ ಅರ್ಪಿತಾ ತಿಳಿಸಿದರು.

‘ಜೊತೆಗೆ ಈ ಬಾರಿ ಮಾರುಗಳು ಉತ್ತರದ ಭಾಗದಿಂದ ಬೀಸಿ ಬರುತ್ತಿವೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ನೈರುತ್ಯದಿಂದ ಗಾಳಿ ಬೀಸುತ್ತಿತ್ತು. ಚಳಿ ಹೆಚ್ಚಳಕ್ಕೆ ಉತ್ತರ ಮಾರುತಗಳೂ ಕಾರಣವಾಗಿವೆ’ ಎಂದರು.

ಹಣ್ಣು, ತರಕಾರಿ ಬೆಳೆಗೆ ಹಾನಿ

ಶೀತ ಗಾಳಿ ಬೀಸುತ್ತಿರುವ ಕಾರಣ ಹಣ್ಣು, ತರಕಾರಿ ಬೆಳೆಗೆ ಹಾನಿಯಾಗುವ ಸಾಧತೆ ಇದೆ. ಈಗ ಜಿಲ್ಲೆಯಲ್ಲಿ ಹೆಚ್ಚು ಜನರು ಕಲ್ಲಂಗಡಿ ನಾಟಿ ಆರಂಭಿಸಿದ್ದು ಚಳಿಯಿಂದ ಪೈರು ಉಳಿಸಿಕೊಳ್ಳುವುದು ಸವಾಲಾಗಿದೆ.

‘ಚಳಿಯಿಂದಾಗಿ ಹಣ್ಣು, ತರಕಾರಿ ಬೆಳೆಗಳಿಗೆ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕಾಂಶ ಒದಗಿಸುವ ಸಿಂಗಲ್‌ ಸೂಪರ್‌ ಫಾಸ್ಪೇಟ್‌ (ಬೂದಿ) ಗೊಬ್ಬರ ಹಾಕಬೇಕು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶನ ಮಂಜುನಾಥ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.