ಮದ್ದೂರು: ಕ್ರಿಕೆಟ್ ಬೆಟ್ಟಿಂಗ್ ಕಿಂಗ್, ಕ್ಯಾಸಿನೊ ಜೂಜು ಅಡ್ಡೆಗಳ ದೊರೆಯಾಗಿರುವ ಕದಲೂರು ಉದಯ್ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ಮುಖಂಡರಿಗೆ ಇಲ್ಲ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಉದಯ್ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕರಿಗೆ ಮುಂಬೈಗೆ ಕರೆದುಕೊಂಡು ಹೋಗಿ ಅವರಿಗೆ ಸಕಲ ಸೌಲಭ್ಯ ಒದಗಿಸಿದ್ದರು. ಶ್ರೀಲಂಕಾ ಸೇರಿದಂತೆ ವಿವಿಧೆಡೆ ಜೂಜು ಅಡ್ಡೆ ನಡೆಸುವ ಅವರು ಮದ್ದೂರು ಕ್ಷೇತ್ರದಲ್ಲಿ ಹಣ ಚೆಲ್ಲುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಹಣಕ್ಕೆ ಟಿಕೆಟ್ ಮಾರಿಕೊಂಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಮೂಲ ಕಾಂಗ್ರೆಸ್ಸಿಗರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪುರಸಭೆ ಸದಸ್ಯೆ ಕೋಕಿಲಾ ಅರುಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿ ಮೂಲ ಕಾಂಗ್ರೆಸ್ ನಾಯಕನನ್ನು ಕಡೆಗಣಿಸಿದ್ದಾರೆ. ಆ ಮೂಲಕ ಕೃಷ್ಣ ಕುಟಂಬದ ಎಸ್.ಗುರುಚರಣ್‌ಗೆ ಅನ್ಯಾಯ ಮಾಡಿದ್ದಾರೆ ಎಂದು ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಣಕ್ಕೆ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುಚರಣ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ‘ಭಾನುವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಅವರ ಅನಿಸಿಕೆ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.