ಮೈಸೂರು: ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲ್ಲುತ್ತಾರೆ ಎಂದು ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.
ಆಪ್ತ ಕೀಲಾರ ಜಯರಾಂ ಅವರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರ ವಿರುದ್ಧ ಸಿಡಿದೆದ್ದಿರುವ ಮರಿತಿಬ್ಬೇಗೌಡ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಇಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆದ್ದೇ ಗೆಲ್ತಾರೆ. ಕ್ಷೇತ್ರದಲ್ಲಿ ಅವರ ಪರವಾದ ಅಲೆ ಇದೆ. ನಾನೇಕೆ ಮಧು ಅವರನ್ನ ಬೆಂಬಲಿಸಿದೆ ಎಂಬುದು ಮತದಾರರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.
ಜೆಡಿಎಸ್ ಪಕ್ಷದ ಕೆಲ ಆಂತರಿಕ ವಿಚಾರಗಳನ್ನು ಈಗ ಮಾತನಾಡಲು ಬಯಸುವುದಿಲ್ಲ ಎಂದರು.
ಒಕ್ಕಲಿಗರ ಮತಗಳು ಜೆಡಿಎಸ್‌ಗೇ ಮೀಸಲಿರುತ್ತವೆ ಎಂದು ನಾನು ಹೇಳುವುದಿಲ್ಲ. ಹಿಂದೆ ಬೇರೆ ಸಮುದಾಯದವರು ಗೆದ್ದಿರುವ ಉದಾಹರಣೆ ಇದೆ. ಈ ಬಾರಿ ಕಣದಲ್ಲಿರುವ ಮೂರ್ನಾಲ್ಕು ಮಂದಿ ಒಕ್ಕಲಿಗ ಸಮಾಜದವರೇ ಆಗಿದ್ದಾರೆ. ಎಲ್ಲರಿಗೂ ಮತ ಹಾಕಲು ಮತದಾರರಿಗೆ ಅವಕಾಶ ಇದೆ. ಪ್ರಾಶಸ್ತ್ಯದ ಮತಗಳನ್ನು ಎಲ್ಲರಿಗೂ ಕೊಡಬಹುದು ಎಂದರು.
ಈ ಚುನಾವಣೆಯು ಜೆಡಿಎಸ್ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.