ಶ್ರೀರಂಗಪಟ್ಟಣ: ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಪ್ರಜ್ಞಾವಂತರ ವೇದಿಕೆ ಮತ್ತು ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಿಧಾನೋತ್ಸವ ಹಬ್ಬದ ಮಾದರಿಯಲ್ಲಿ ಸಂಭ್ರಮದಿಂದ ನಡೆಯಿತು.
ಪಟ್ಟಣದ ಕುವೆಂಪು ವೃತ್ತದಿಂದ ಮೆರವಣಿಗೆ ಆರಂಭವಾಯಿತು. ಭಾರತ ಸಂವಿಧಾನದ ಪ್ರತಿಯನ್ನು ಅಲಂಕೃತ ವಾಹನದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮೆರವಣಿಗೆಗೆ ಚಾಲನೆ ನೀಡಿದರು.
ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳು, ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳ ಫಲಕಗಳುಳ್ಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿದ್ದವು. ಚರ್ಮವಾದ್ಯ ಮೇಳ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು.
ಪಟ್ಟಣದ ಪೂರ್ವ ಕೋಟೆ ದ್ವಾರ, ಪುರಸಭೆ ವೃತ್ತ, ಡಾ.ಸಿ. ಬಂದೀಗೌಡ ಆಸ್ಪತ್ರೆ, ಎಲ್‌ಐಸಿ ಸರ್ಕಲ್, ಲಕ್ಷ್ಮಿಗುಡಿ ಸರ್ಕಲ್ ಮಾರ್ಗದಲ್ಲಿ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಸಂವಿಧಾನದ ಪ್ರತಿಗೆ ಪುಷ್ಪಾರ್ಚನೆ ನಡೆಯಿತು. ಎರಡೂವರೆ ತಾಸುಗಳ ಕಾಲ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು. ಭಾರತ ಸಂವಿಧಾನ ಮತ್ತು ಅಂಬೇಡ್ಕರ್ ಪರ ಘೋಷಣೆಗಳು ಮೊಳಗಿದವು. ಅಂಬೇಡ್ಕರ್ ವೃತ್ತದಲ್ಲಿ ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಇತರರೂ ದನಿಗೂಡಿಸಿದರು.
ಪೂಜೆ ಸಲ್ಲದು: ಪಟ್ಟಣದ ಕೆನರಾ ಬ್ಯಾಂಕ್ ಎದುರು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಮಂಗಳೂರು ವಿಜಯ್, ‘ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸಬೇಕೇ ಹೊರತು ಅವರನ್ನು ಪೂಜಿಸಬಾರದು’ ಎಂದು ಹೇಳಿದರು.
‘ಸಂವಿಧಾನ ನಮಗೆ ಮತದಾನದ ಹಕ್ಕು ಕೊಟ್ಟಿದೆ. ಘನತೆಯಿಂದ ಬದುಕಲು ಅವಕಾಶವನ್ನೂ ನೀಡಿದೆ. ಆದರೆ ಈ ಸಂವಿಧಾನದಿಂದ ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇದುವರೆಗೆ ಸಿಕ್ಕಿಲ್ಲ’ ಎಂದು ವಿಷಾದಿಸಿದರು.
ಆಕ್ರೋಶ: ‘ಈಗಿರುವ ಸಂವಿಧಾನದಿಂದ ಗೌರವ ಸಿಗುತ್ತಿಲ್ಲ ಎಂದು ಪೇಜಾವರ ಮಠಾಧೀಶರು ಮತ್ತು ಅವರ ಸಂಗಡಿಗರ ಹೇಳಿರುವುದು ಹಾಸ್ಯಾಸ್ಪದವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.
‘ನಾವು ಶೋಷಣೆಯ ಸನಾತನ ಯುಗದಿಂದ ಸಂವಿಧಾನ ಯುಗಕ್ಕೆ ಕಾಲಿಟ್ಟಿದ್ದೇವೆ. 1949ರ ನ. 26ರಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಗೌರವದಿಂದ ಬದುಕುತ್ತಿದ್ದೇವೆ. ಆದರೆ ಮನುವಾದಿಗಳಿಗೆ ನಾವು ಘನತೆಯಿಂದ ಬದುಕುವುದನ್ನು ಸಹಿಸಲು ಆಗುತ್ತಿಲ್ಲ. ಅವರದ್ದು ರೋಗಿಷ್ಠ ಮನಸ್ಥಿತಿ’ ಎಂದು ಆಕ್ರೋಶದಿಂದ ಹೇಳಿದರು.
ಹರಳಹಳ್ಳಿ ಗೋವಿಂದರಾಜು ಜಾಗೃತಿ ಗೀತೆಗಳನ್ನು ಹಾಡಿದರು. ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್. ಯಮುನಾ, ಚಿಂತಕ ಕ್ಯಾತನಹಳ್ಳಿ ಚಂದ್ರಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ರೈತ ಸಂಘದ ಸಂಚಾಲಕ ಪಾಂಡು, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವಣ್ಣ, ಮಾಜಿ ಅಧ್ಯಕ್ಷ ಕೆ.ಟಿ. ರಂಗಯ್ಯ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್. ರಮೇಶ್, ಶಂಕರೇಗೌಡ, ದೊಡ್ಡಪಾಳ್ಯ ಜಯರಾಮೇಗೌಡ, ಕೆ.ಎಸ್. ಜಯಶಂಕರ್, ಚಿಕ್ಕತಮ್ಮೇಗೌಡ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕರುನಾಡ ರಕ್ಷಣಾ ಪಡೆ ಅಧ್ಯಕ್ಷೆ ಪ್ರಿಯಾ ರಮೇಶ್, ದಸಂಸ ಮುಖಂಡರಾದ ಎಂ. ಚಂದ್ರಶೇಖರ್, ಹೊನ್ನಯ್ಯ, ಕುಬೇರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.