ಮಂಡ್ಯ: ‘ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ಕನ್ನಡದ ಮೊದಲ ಶಾಸನವಾದ ‘ಹಲ್ಮಿಡಿ ಶಿಲಾ ಶಾಸನ’ದ ಪ್ರತಿಕೃತಿ ಸ್ತಂಭವನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ನಿರ್ಮಿಸಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ತಯಾರಿಸಲಾದ ಹಲ್ಮಿಡಿ ಶಾಸನದ ಕಲ್ಲಿನ ಪ್ರತಿಕೃತಿಯನ್ನು ಮಂಡ್ಯಕ್ಕೆ ತರಿಸಿಕೊಂಡು, ಅಕಾಡೆಮಿಯು ಸಿವಿಲ್ ಕಾಮಗಾರಿಗೆ ಸಿದ್ಧಪಡಿಸಿರುವ ನೀಲನಕಾಶೆ ಪ್ರಕಾರ ಪ್ರತಿಷ್ಠಾಪಿಸಲಾಗಿದೆ.
ಕಾಂಕ್ರೀಟ್ ತಳಹದಿಯ ಮೇಲೆ ಗ್ರಾನೈಟ್ ಉದ್ಘಾಟನಾ ಫಲಕವನ್ನು ಅಳವಡಿಸಿ, ಅದರ ಮೇಲೆ ಗ್ರಾನೈಟ್ ಶಿಲೆಯನ್ನು ಇಟ್ಟು, ಅದರ ಮೇಲ್ಭಾಗದಲ್ಲಿ ಹಲ್ಮಿಡಿ ಶಾಸನದ ಶಿಲೆಯ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಲ್ಮಿಡಿ ಶಾಸನದ ಶಿಲೆಯು ಸುಮಾರು 2 ಅಡಿ ಅಗಲ, 4 ಅಡಿ ಉದ್ದವಿದೆ. ಒಟ್ಟಾರೆ ಪ್ರತಿಕೃತಿ ಸ್ತಂಭವು 7 ಅಡಿ ಎತ್ತರ ಮತ್ತು 4 ಅಡಿ ಅಗಲದ ವಿನ್ಯಾಸದಲ್ಲಿ ನಿರ್ಮಾಣವಾಗಿದೆ.
₹2 ಲಕ್ಷ ವೆಚ್ಚ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹2 ಲಕ್ಷವನ್ನು ಬಳಕೆ ಮಾಡಿಕೊಂಡು, ಲೋಕೋಪಯೋಗಿ ಇಲಾಖೆಯು ಒಂದು ವಾರದಲ್ಲಿ ಪ್ರತಿಕೃತಿ ಸ್ತಂಭವನ್ನು ನಿರ್ಮಾಣ ಮಾಡಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ
ನ.1ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ಬೆಳಿಗ್ಗೆ 10.30ಕ್ಕೆ ಹಲ್ಮಿಡಿ ಶಿಲಾ ಶಾಸನದ ಪ್ರತಿಕೃತಿ ಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹಲ್ಮಿಡಿ ಶಾಸನವು ಕದಂಬ ಲಿಪಿಯಲ್ಲಿರುವ ಅತ್ಯಂತ ಹಳೆಯ ಕನ್ನಡ ಶಾಸನವಾಗಿದೆ. ಇದನ್ನು ಹಾಸನ ಜಿಲ್ಲೆಯ ಗಡಿಯಲ್ಲಿರುವ ಹಲ್ಮಿಡಿ ಗ್ರಾಮದಲ್ಲಿ 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಡಾ.ಎಂ.ಎಚ್.ಕೃಷ್ಣ ಅವರು ಪತ್ತೆ ಮಾಡಿದರು. ಶಾಸನವು 16 ಸಾಲುಗಳನ್ನು ಹೊಂದಿದ್ದು, ಮರಳು ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ.
ಶತ್ರು ರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲಾಗುತ್ತಿತ್ತು ಎಂಬುದನ್ನು ಇದು ತೋರಿಸುತ್ತದೆ.
ಕನ್ನಡದ ಮೊದಲ ಶಾಸನ ‘ಹಲ್ಮಿಡಿ ಶಾಸನ’ ಶಾಸನದ ಪ್ರತಿಕೃತಿ ರೂಪಿಸಿದ ಶಿಲ್ಪಕಲಾ ಅಕಾಡೆಮಿ 1936ರಲ್ಲಿ ಪತ್ತೆಯಾದ ದತ್ತಿ ಶಾಸನ
ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಿಲಾ ಶಾಸನದ ಬಗ್ಗೆ ಕನ್ನಡಿಗರಿಗೆ ಜಾಗೃತಿ ಮೂಡಿಸಲು ಕಾವೇರಿ ಉದ್ಯಾನದಲ್ಲಿ ಪ್ರತಿಕೃತಿ ಸ್ತಂಭವನ್ನು ನಿರ್ಮಾಣ ಮಾಡಲಾಗಿದೆಕುಮಾರ ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.