ADVERTISEMENT

ಮದ್ದೂರು ಎಳನೀರು ಮಾರುಕಟ್ಟೆ ಕಾರ್ಮಿಕರಿಗೆ ಕೊರೊನಾ ವೈರಸ್ ಭೀತಿ

ಹೊರಾಜ್ಯಗಳಿಂದ ಬರುವ ಚಾಲಕರು, ಕ್ಲೀನರ್‌, ಕೂಲಿಗಳನ್ನು ಕಂಡರೆ ಸ್ಥಳೀಯರಿಗೆ ಭಯ

ಎಂ.ಎನ್.ಯೋಗೇಶ್‌
Published 17 ಮಾರ್ಚ್ 2020, 9:06 IST
Last Updated 17 ಮಾರ್ಚ್ 2020, 9:06 IST
ಮದ್ದೂರಿನ ಎಳನೀರು ಮಾರುಕಟ್ಟೆ (ಸಂಗ್ರಹ ಚಿತ್ರ)
ಮದ್ದೂರಿನ ಎಳನೀರು ಮಾರುಕಟ್ಟೆ (ಸಂಗ್ರಹ ಚಿತ್ರ)   

ಮಂಡ್ಯ: ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಎಳನೀರು ಮಾರುಕಟ್ಟೆ ಎಂಬ ಖ್ಯಾತಿಗಳಿಸಿರುವ ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ಸೋಂಕಿನ ಭೀತಿ ಮನೆ ಮಾಡಿದೆ. ವಿವಿಧ ರಾಜ್ಯಗಳಿಂದ ಬರುವ ಚಾಲಕರು, ಕಾರ್ಮಿಕರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ವಿಶೇಷ ರುಚಿಗೆ ಹೆಸರುವಾಸಿಯಾಗಿರುವ ಮದ್ದೂರು ಎಳನೀರು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗುಜರಾಜ್‌, ಹರಿಯಾಣ, ರಾಜಸ್ತಾನ ಸೇರಿ ಹಲವರು ರಾಜ್ಯಗಳಿಗೆ ರವಾನೆಯಾಗುತ್ತದೆ. ಎಳನೀರು ಕೊಂಡೊಯ್ಯಲು ವಿವಿಧ ರಾಜ್ಯಗಳ ನೂರಾರು ಲಾರಿಗಳು ಎಳನೀರು ಮಾರುಕಟ್ಟೆಗೆ ಬರುತ್ತವೆ. ಲಾರಿ ಚಾಲಕರು, ಕ್ಲೀನರ್‌ಗಳು, ಕೂಲಿಗಳು ಬರುತ್ತಾರೆ. ಈಗ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ವರ್ತಕರು, ಕಾರ್ಮಿಕರು ಹೊರರಾಜ್ಯಗಳಿಂದ ಬರುವ ಕಾರ್ಮಿಕರನ್ನು ಕಂಡರೆ ಭಯಪಡುತ್ತಿದ್ದಾರೆ.

ಕೆಲ ದಿನಗಳವರೆಗೆ ಹೊರರಾಜ್ಯಗಳ ಲಾರಿಗಳು ಹಾಗೂ ಕಾರ್ಮಿಕರ ಪ್ರವೇಶವನ್ನು ನಿಷೇಧಿಸಬೇಕು ಎಂದು ಸ್ಥಳೀಯ ಕಾರ್ಮಿಕರು ಒತ್ತಾಯಿಸಿದ್ದಾರೆ. ರೋಗಭೀತಿ ಹಿನ್ನೆಲೆಯಲ್ಲಿ ಹೊರರಾಜ್ಯಗಳ ಚಾಲಕರು, ಕಾರ್ಮಿಕರ ಜೊತೆ ಮಾತನಾಡಲು, ಅವರನ್ನು ಮುಟ್ಟಲು ಸ್ಥಳೀಯರು ಭಯಪಡುತ್ತಿದ್ದಾರೆ. ಭರ್ಜರಿ ವಹಿವಾಟಿಗೆ ಹೆಸರಾಗಿದ್ದ ಮಾರುಕಟ್ಟೆಯಲ್ಲಿ ಈಗ ಭಯ ಆವರಿಸಿದೆ. ಮುಖಗವಸು ಹಾಕಿಕೊಂಡು ಕಾರ್ಮಿಕರು ಎಳನೀರು ಇಳಿಸುವ, ತುಂಬುವ ದೃಶ್ಯಗಳು ಸಾಮಾನ್ಯವಾಗಿದೆ.

ADVERTISEMENT

‘ಹೊರರಾಜ್ಯಗಳಿಂದ ಬಂದವರನ್ನು ಕಂಡರೆ ಭಯವಾಗುತ್ತದೆ. ಚಾಲಕರು, ಕೂಲಿಗಳು ವಿವಿಧ ರಾಜ್ಯಗಳನ್ನು ದಾಟಿ ಬರುತ್ತಾರೆ. ಅವರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕೆಲವು ದಿನಗಳವರೆಗೆ ಅವರು ಬಾರದಿದ್ದರೆ ಒಳ್ಳೆಯದು’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಪೂರೈಕೆ ಕುಸಿತ: ಕೋವಿಡ್-19ಭೀತಿಯಿಂದಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ಎಳನೀರು ಪ್ರಮಾಣದಲ್ಲಿ ಕೊಂಚ ಕುಸಿತ ಕಂಡಿದೆ. ರೋಗ ಭೀತಿಯಿಂದ ಮಾರುಕಟ್ಟೆ ಮುಚ್ಚಿದೆ ಎಂಬ ಸುದ್ದಿಯೂ ಹರಿದಾಡಿದ್ದು, ರೈತರು ಎಳನೀರು ಕೊಯ್ಲು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ವಿವಿಧ ರಾಜ್ಯಗಳಿಂದ ಬಂದಿರುವ ಲಾರಿಗಳು ಮಾರುಕಟ್ಟೆ ಅಂಗಳದಲ್ಲೇ ನಿಂತಿವೆ.

‘ರೋಗಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆ ಮುಚ್ಚುವಂತೆ ನಮಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ವಹಿವಾಟು ಎಂದಿನಂತೆ ನಡೆಯುತ್ತಿದೆ. ಆದರೆ ಮಾರುಕಟ್ಟೆ ಮುಚ್ಚಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಹೀಗಾಗಿ ಪೂರೈಕೆಯಲ್ಲಿ ಶೇ 20ರಷ್ಟು ಕಡಿಮೆಯಾಗಿದೆ’ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್ ಹೇಳಿದರು.

ಎಳನೀರು ಕೊರತೆ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವ್ಯಾಪಾರಿಗಳು ಎಳನೀರು ಮಾರಾಟ ಮಾಡುತ್ತಾರೆ. ರಸ್ತೆಯ ಎರಡೂ ಕಡೆ ಅಸಂಖ್ಯಾತ ಅಂಗಡಿಗಳಿವೆ. ರೋಗಭೀತಿಯಲ್ಲಿ ಎಳನೀರು ಕುಡಿಯಲು ಆದ್ಯತೆ ನೀಡುತ್ತಿದ್ದಾರೆ. ಆದರೆ ಎಳನೀರು ಕೊರತೆಯಾಗಿದ್ದು ವ್ಯಾಪಾರಿಗಳು ನಿರಾಸೆ ಅನುಭವಿಸುತ್ತಿದ್ದಾರೆ.

‘ಬೇಸಿಗೆಯೂ ಆಗಿರುವ ಕಾರಣ ಜನ ಎಳನೀರು ಕೇಳುತ್ತಿದ್ದಾರೆ. ಆದರೆ ಸಂಜೆಯವರೆಗೂ ಮಾರಾಟ ಮಾಡುವಷ್ಟು ಎಳನೀರು ಸಿಗುತ್ತಿಲ್ಲ. ಮಧ್ಯಾಹ್ನದ ವೇಳೆಗೆ ಎಳನೀರು ಖಾಲಿಯಾಗುತ್ತವೆ. ಮದ್ದೂರು ಮಾರುಕಟ್ಟೆಯಲ್ಲೂ ಎಳನೀರು ಕೊರತೆಯಾಗಿದೆ’ ಎಂದು ಹೆದ್ದಾರಿಯಲ್ಲಿ ಎಳನೀರು ಮಾರುವ ವ್ಯಾಪಾರಿ ಶ್ರೀನಿವಾಸ್‌ ಹೇಳಿದರು.

ಆರೋಗ್ಯ ಇಲಾಖೆಯಿಂದ ತಪಾಸಣೆ

ಎಳನೀರು ಮಾರುಕಟ್ಟೆಯಲ್ಲಿ ರೋಗಭೀತಿ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಾರುಕಟ್ಟೆ ಆವರಣದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೊರರಾಜ್ಯಗಳಿಂದ ಬಂದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಆಟೊ ಮೂಲಕ ಜಾಗೃತಿ ಸಂದೇಶ ಘೋಷಣೆ ಮಾಡಲಾಗುತ್ತಿದೆ. ಭಿತ್ತಿ ಪತ್ರಗಳನ್ನು ಹಂಚಿಕೆ ಮಾಡಿ ಎಚ್ಚರಿಕೆಯಿಂದ ಇರುವಂತೆ ಮನವರಿಗೆ ಮಾಡಿಕೊಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.