ಮಂಡ್ಯ: ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ಎರಡು ವರ್ಷಗಳಿಂದ ಪರಿಹಾರ ಬಂದಿಲ್ಲ. ಬರ, ಬೆಳೆ ನಷ್ಟದಿಂದ ರೈತರು ನಲುಗಿದರೂ ಸರ್ಕಾರ ಹಾಗೂ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಮುಂಗಾರು ಹಂಗಾಮಿನಲ್ಲಿ ವಿಮಾ ಯೋಜನೆಗಳಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿ ಪ್ರತಿ ಹಂಗಾಮಿನಲ್ಲೂ ಸಾವಿರಾರು ರೈತರು ವಿಮಾ ಕಂತು ಪಾವತಿ ಮಾಡಿದ್ದಾರೆ. 2015ರಿಂದಲೂ ಜಿಲ್ಲೆಯಲ್ಲಿ ಬರಗಾಲ ಕಾಡುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯ ರೈತರು ವಿಮಾ ಯೋಜನೆಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ.
2016ರ ಮುಂಗಾರು ಹಂಗಾಮಿನಲ್ಲಿ 10 ಸಾವಿರ ರೈತರು ಫಲಸ್ ಬಿಮಾ ಯೋಜನೆಗೆ ಹಣ ಕಟ್ಟಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ರೈತರು ಬ್ಯಾಂಕ್‌ನಲ್ಲಿ ಹಣ ಪಾವತಿ ಮಾಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬರಕ್ಕೆ ತುತ್ತಾದ ರೈತರಿಗೆ ವಿಮಾ ಕಂಪನಿಗಳು ₹ 9.5 ಕೋಟಿ ಹಣ ಪಾವತಿ ಮಾಡಿವೆ. ಒಮ್ಮೆ ಮಾತ್ರ ಹಣ ಬಂದಿದ್ದು ನಂತರದ ಮೂರು ಹಂಗಾಮುಗಳಲ್ಲಿ ವಿಮಾ ಪರಿಹಾರ ಹಣ ಬಂದಿಲ್ಲ.
2016 ಹಿಂಗಾರು ಹಂಗಾಮಿನಲ್ಲಿ 73,966 ರೈತರು ಫಲಸ್ ಬಿಮಾ ಯೋಜನೆಗೆ ನೋಂದಣಿಯಾಗಿದ್ದು ₹ 21.19 ಕೋಟಿ ಹಣ ಬಾಕಿ ಇನ್ನೂ ಬಂದಿಲ್ಲ. 2017ರ ಎರಡೂ ಹಂಗಾಮುಗಳಿಂದ 33,341 ರೈತರು ವಿಮೆ ಕಟ್ಟಿದ್ದಾರೆ. ನಷ್ಟಕ್ಕೀಡಾದ ರೈತರ ₹ 41.23 ಕೋಟಿ ಹಣ ಬರಬೇಕಾಗಿದೆ. ಮೂರು ಹಂಗಾಮುಗಳಲ್ಲಿ ಜಿಲ್ಲೆಯ ರೈತರಿಗೆ ಒಟ್ಟು ₹ 62.42 ಕೋಟಿ ಬಾಕಿ ಬರಬೇಕಾಗಿದೆ.
‘ವಿಮಾ ಯೋಜನೆಯ ಉದ್ದೇಶ ಉತ್ತಮವಾದುದು. ಆದರೆ ಸರ್ಕಾರ ವಿಮಾ ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನ ಮಾಡುತ್ತಿಲ್ಲ. ಹೋಬಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತ ಮಾಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಜೊತೆಗೆ ಅಧಿಕಾರಿಗಳು ವಿಮಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಕಾರ್ಯವನ್ನೂ ಸರಿಯಾಗಿ ಮಾಡುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲ ಕಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೂ ಮೂರು ಹಂಗಾಮುಗಳಿಂದ ಪರಿಹಾರದ ಹಣ ಬಂದಿಲ್ಲ. ಬಡರೈತರ ಹಣದಿಂದ ವಿಮಾ ಕಂಪನಿಗಳು ಶ್ರೀಮಂತಗೊಳ್ಳುತ್ತಿವೆ. ಪರಿಹಾರ ಬಾರದ ಕಾರಣ ರೈತರು ಬೆಳೆ ವಿಮಾ ಯೋಜನೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.’ ಎಂದು ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹೇಳಿದರು.
‘ಕೃಷಿ ಇಲಾಖೆಯಿಂದ ಸಮೀಕ್ಷೆ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಆದರೆ ಹಣ ಬಿಡುಗಡೆಯಾಗುವುದು ತಡವಾಗಿದೆ. ಆದರೆ ರೈತರ ಖಾತೆಗಳಿಗೆ ಖಂಡಿತಾ ಹಣ ಬಿಡುಗಡೆಯಾಗುತ್ತದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಹೊಸ ಹಂಗಾಮಿನ ಫಸಲ್ ಬಿಮಾ ಯೋಜನೆಗೆ ರೈತರು ನೋಂದಣಿ ಮಾಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದರು.
ತೋಟಗಾರಿಕೆ ಇಲಾಖೆ: ತೋಟಗಾರಿಕೆ ಇಲಾಖೆಯಲ್ಲಿ ಮೂರು ವಿಧದ ವಿಮಾ ಯೋಜನೆಗಳಿಗೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಹವಾಮಾನ ಆಧಾರಿತ ವಿಮಾ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿಯ ತೆಂಗು ಅಭಿವೃದ್ಧಿ ವಿಮಾ ಯೋಜನೆಗಳಿವೆ. ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ 2017–18ನೇ ಸಾಲಿನಲ್ಲಿ 7,444 ರೈತರು ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ ನಷ್ಟ ಅನುಭವಿಸಿದ ರೈತರಿಗೆ ₹ 4.45 ಕೋಟಿ ಬಾಕಿ ಬರಬೇಕಾಗಿದೆ.
‘2016–17ನೇ ಸಾಲಿನಲ್ಲಿ 6,685 ರೈತರಿಗೆ ₹ 3.74 ಕೋಟಿ ವಿಮಾ ಪರಿಹಾರ ಪಾವತಿ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಹೇಳಿದರು.
***
ಮಂಡ್ಯ ಜಿಲ್ಲೆಗೆ ಬರಬೇಕಾದ ಬೆಳೆ ವಿಮೆ ಪರಿಹಾರ
* 2016
ಹಿಂಗಾರು ವಿಮೆ ಬಾಕಿ: ₹ 21.19 ಕೋಟಿ
ಸಲ್ಲಿಕೆಯಾದ ಅರ್ಜಿ: 73,966
2017
ಮುಂಗಾರು–ಹಿಂಗಾರು ಬಾಕಿ: ₹ 41.23 ಕೋಟಿ
ಸಲ್ಲಿಕೆಯಾದ ಅರ್ಜಿಗಳು: 33,341
ಒಟ್ಟು ಬಾಕಿ: 62.42 ಕೋಟಿ
* ತೋಟಗಾರಿಕೆ ಇಲಾಖೆ
ಹವಾಮಾನ ಆಧಾರಿತ ವಿಮಾ ಯೋಜನೆ
₹ 4.45 ಕೋಟಿ ಬಾಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.