ಮಂಡ್ಯ: ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಮಂಡ್ಯದ ಕರ್ನಾಟಕ ಸಂಘದ ಸಹಯೋಗದಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ನ.22 ಮತ್ತು 23ರಂದು ಮಂಡ್ಯ ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.
ಈ ಉತ್ಸವದ ಮೂಲ ಉದ್ದೇಶ ದೇಶೀಯ ಸಂಸ್ಕೃತಿಯೊಳಗೆ ಬೆರೆತು ಜನಸಮುದಾಯದ ಜೀವನಾನುಭವ ಹಾಗೂ ಅನುಭಾವದ ಭಾಗವಾಗಿರುವ ಭಕ್ತಿಮಾರ್ಗಗಳನ್ನು ಶೋಧಿಸುವುದಾಗಿದೆ. ಆ ಮೂಲಕ ಈ ಧಾರೆಗಳನ್ನು ಅಧ್ಯಯನ ಮತ್ತು ಸಂಶೋಧನೆಯ ನೆಲೆಗಟ್ಟಿಗೆ ತಂದು ವಿಶ್ವಾತ್ಮಕಗೊಳಿಸುವ ಪ್ರಯತ್ನದ ಮೊದಲ ಹೆಜ್ಜೆಯೇ ಈ ಸಂಸ್ಕೃತಿ ಉತ್ಸವ ಎಂದು ಹೇಳಿದರು.
ಎರಡು ದಿನಗಳ ಈ ಉತ್ಸವದಲ್ಲಿ ಶರಣ, ನಾಥ, ಶಾಕ್ತ, ಅಜೀವಕ, ಅಚಲ, ಸೂಫಿ, ಸಿದ್ಧ, ಕನಕಧಾರೆ ಒಟ್ಟು 8 ಧಾರೆಗಳ ಬಗೆಗೆ ಪರಿಚಯಾತ್ಮಕ ವಿಷಯ ಮಂಡನೆ, ಸಂವಾದ, ಚರ್ಚೆ, ನಡು ನಡುವೆ ತತ್ವಪದ, ವಚನ ಹಾಡುಗಾರಿಕೆ, ಗಮಕದಂತಹ ಮೂಲಧಾಟಿಯ ಗಾಯನ ವಿಶೇಷ ಪ್ರಸ್ತುತಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮವು ನವೆಂಬರ್ 22ರ ಬೆಳಿಗ್ಗೆ 10.30ರಿಂದ ನಡೆಯಲಿದ್ದು, ಬೆಳಿಗ್ಗೆ 10.30ರಿಂದ 2.30ರವರೆಗೆ ಕೊಳ್ಳೇಗಾಲದ ಕೈಲಾಸಮೂರ್ತಿ ಹಾಗೂ ಜ್ಯೋತಮ್ಮ ಯಲಗಟ್ಟಿ ಅವರಿಂದ ತತ್ವಪದ ಗಾಯನ ಮತ್ತು ಎರಡು ಗೋಷ್ಠಿಗಳು ನಡೆಯಲಿವೆ ಎಂದರು.
ನ.23ರಂದು ಬೆಳಿಗ್ಗೆ 10 ರಿಂದ 1.30ರವರೆಗೆ ಪದ್ಮಾಲಯ ನಾಗರಾಜ್ ಹಾಗೂ ಜ್ಯೋತಮ್ಮ ಯಲಗಟ್ಟಿ ಅವರಿಂದ ತತ್ವಪದ ಗಾಯನ ಮತ್ತು ಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ 2.30ರಿಂದ 4 ಗಂಟೆಯವರೆಗೆ ಸಂವಾದ ಮತ್ತು ಮುಕ್ತಾಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.