ADVERTISEMENT

ಮಂಡ್ಯ: ‘ದಲಿತರ ಅಂತರಾಳದ ಧ್ವನಿ’ ಶ್ರೀನಿವಾಸ್‌ ಇನ್ನಿಲ್ಲ

ನಾಲ್ಕು ದಶಕಗಳ ಎಂ.ಬಿ.ಶ್ರೀನಿವಾಸ್‌ ಹೋರಾಟದ ಹಾದಿ, ಉತ್ಸಾಹದ ಚಿಲುಮೆ

ಎಂ.ಎನ್.ಯೋಗೇಶ್‌
Published 21 ನವೆಂಬರ್ 2021, 19:30 IST
Last Updated 21 ನವೆಂಬರ್ 2021, 19:30 IST
ಪೌರತ್ವ ಕಾಯ್ದೆ ವಿರುದ್ಧ ನಡೆದ ಹೋರಾಟದಲ್ಲಿ ಎಂ.ಬಿ.ಶ್ರೀನಿವಾಸ್‌ ಮಾತು (ಸಂಗ್ರಹ ಚಿತ್ರ)
ಪೌರತ್ವ ಕಾಯ್ದೆ ವಿರುದ್ಧ ನಡೆದ ಹೋರಾಟದಲ್ಲಿ ಎಂ.ಬಿ.ಶ್ರೀನಿವಾಸ್‌ ಮಾತು (ಸಂಗ್ರಹ ಚಿತ್ರ)   

ಮಂಡ್ಯ: ದಲಿತ, ಪ್ರಗತಿಪರ ಹೋರಾಟದಲ್ಲಿ ‘ಸೀನಣ್ಣ’ ಎಂದೇ ಗುರುತಿಸಿಕೊಂಡಿದ್ದ ಶ್ರೀನಿವಾಸ್‌ ಇನ್ನಿಲ್ಲ ಎಂಬ ಸುದ್ದಿ ಭಾನುವಾರ ಜಿಲ್ಲೆಯ ಜನರಲ್ಲಿ ನೋವಿನ ಅಲೆ ಸೃಷ್ಟಿಸಿತು. ಎಲ್ಲಾ ಕಾರ್ಯಕ್ರಮಗಳಲ್ಲಿ, ಪ್ರತಿಭಟನೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಅವರ ಸಾವಿನ ಸುದ್ದಿ ಹೋರಾಟಗಾರರ ಮನಸ್ಸನಲ್ಲಿ ಶೂನ್ಯ ಆವರಿಸಿದಂತಾಯಿತು.

ನಾಲ್ಕು ದಶಕಗಳ ಕಾಲ ಹೋರಾಟದ ಜೀವನದಲ್ಲಿದ್ದ ಅವರು ಹಲವರ ಬಾಳಿಗೆ ಬೆಳಕಾಗಿದ್ದರು. ಸಾಕ್ಷರತಾ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಶಿಕ್ಷಣವೇ ಶಕ್ತಿ ಎಂಬ ತತ್ವ ಪ್ರತಿಪಾದಿಸಿದ್ದರು. ದಲಿತರಿಗೆ ಎಲ್ಲೇ ಅನ್ಯಾಯವಾದರೂ ಅವರು ಅವರ ಸಹಾಯಕ್ಕೆ ಧಾವಿಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಎಲ್ಲೇ ಶೋಷಣೆ, ದೌರ್ಜನ್ಯಗಳು ನಡೆದಾಗ ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಮನಸ್ಸಿನಲ್ಲಿ ಹೋರಾಟದ ಕಿಚ್ಚು ಹೊತ್ತಿಸಿಕೊಂಡಿದ್ದ ಅವರು ಸೈಕಲ್‌ನಲ್ಲಿ ಹಳ್ಳಿಗಳ ಪ್ರವಾಸ ಮಾಡಿ ಬಡವರ ಪರ ನಿಲ್ಲುತ್ತಿದ್ದರು.

ಅವರಿಗೆ 60 ವಷರ್ ತುಂಬಿದ ದಿನ ಅವರು ಭಾವುಕರಾಗಿದ್ದರು. ಅವರ ಅಭಿಮಾನಿಗಳು ಸೇರಿ ‘ದಲಿತರ ಅಂತರಾಳದ ಧ್ವನಿ’ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು. ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಕೃತಿಯನ್ನು ಸಂಪಾದಿಸಿದ್ದರು. ಆ.7ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ಜನ್ಮದಿನ ಸಮಾರಂಭ ವೈಭವದಿಂದ ನಡೆಯಿತು. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಭಿನಂದನಾ ನುಡಿಗಳನ್ನಾಡಿದ್ದರು.

ADVERTISEMENT

ಅಂದು ಅವರ ಅಭಿಮಾನಿಗಳು, ಹಿತೈಷಿಗಳು ಅವರ ಮೇಲೆ ಹೂಮಳೆ ಸುರಿಸಿ ಪ್ರೀತಿಯ ಸನ್ಮಾನ ಮಾಡಿದ್ದರು. ಅವರ ಪುತ್ರಿ ಪ್ರಿಯಾಂಕಾ ‘ಅಪ್ಪಾ ಐ ಲವ್‌ ಯು ಪಾ’ ಗೀತೆಗೆ ಹೆಜ್ಜೆ ಹಾಕಿ ಜನ್ಮದಿನದ ಶುಭಾಶಯ ಕೋರಿದ್ದರು. ಮಗಳ ಜೊತೆ ನೃತ್ಯಕ್ಕೆ ಹೆಜ್ಜೆ ಹಾಕಿದ್ದ ಎಂ.ಬಿ.ಶ್ರೀನಿವಾಸ್‌ ಆನಂದ ಭಾಷ್ಪ ಸುರಿಸಿದ್ದರು. ಎಲ್ಲಾ ಸವಾಲುಗಳನ್ನು ಸರಳವಾಗಿ ಸ್ವೀಕರಿಸುತ್ತಿದ್ದ ಶ್ರೀನಿವಾಸ್‌ ಅವರು ಇಂದಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ಶೂನ್ಯ ಆವರಿಸಿದೆ.

ಜಿಲ್ಲಾ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಈಚೆಗೆ ನಡೆದ ಮೈಷುಗರ್‌ ಉಳಿಸಿ ಹೋರಾಟದಲ್ಲಿ ಎಂ.ಬಿ.ಶ್ರೀನಿವಾಸ್‌ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಿಂಗಳು ಪೂರ್ತಿ ನಡೆದ ಆ ಹೋರಾಟದಲ್ಲಿ ಒಂದು ದಿನವೂ ಶ್ರೀನಿವಾಸ್‌ ತಪ್ಪಿಸಿಕೊಂಡಿದ್ದಿಲ್ಲ. ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದ ಅವರು ಮೈಷುಗರ್‌ ಕಾರ್ಖಾನೆಯ ಚಿಮಣಿಯಲ್ಲಿ ಹೊಗೆಯಾಡುವುದನ್ನೇ ಕಾಯುತ್ತಿದ್ದರು.

‘ಎಂ.ಬಿ.ಶ್ರೀನಿವಾಸ್‌ ಅವರು ಜನಪರ ಹೋರಾಟಗಾರರಾಗಿ ಹೊರಮ್ಮಿದ ವ್ಯಕ್ತಿಯಾಗಿದ್ದು, ದಲಿತ ಸಂಘಟನೆಯಲ್ಲಿ ಸಕ್ರಿಯನಾಗಿದ್ದರು, ಇವರ ಅಕಾಲಿಕಮರಣ ತುಂಬಾ ನೋವನ್ನುಂಟು ಮಾಡಿದೆ. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಸಾಹಿತಿ ಜಿ.ಟಿ.ವೀರಪ್ಪ ತಿಳಿಸಿದರು.

‘ದಲಿತ ಚಳವಳಿಯು ಜಿಲ್ಲೆಯಲ್ಲಿ ಪ್ರಬಲವಾಗಿರುವುದರಲ್ಲಿ ಎಂ.ಬಿ.ಶ್ರೀನಿವಾಸ್‌ ಅವರ ಪಾತ್ರ ಅಪಾರವಾಗಿದೆ. ಪ್ರಗತಿಪರವಾಗಿ ಹೋರಾಟ ಮಾಡುತ್ತಿದ್ದ ವ್ಯಕ್ತಿತ್ವ, ಸಂಘಟನೆಯಲ್ಲಿ ಚಳವಳಿಯನ್ನೇ ಕಳೆದುಕೊಂಡಷ್ಟು ನಷ್ಟವಾಗಿದೆ’ ಎಂದು ಜನಶಕ್ತಿ ಸಂಘಟನೆಯ ಸಿದ್ದರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.