ADVERTISEMENT

ಒಂದೇ ದಿನ ದರ್ಶನ್‌ 28 ಗ್ರಾಮ ಸಂಚಾರ

ಉರಿಬಿಸಿಲನ್ನೂ ಲೆಕ್ಕಿಸದೇ ಸುಮಲತಾ ಪರ ಮತಯಾಚನೆ ಮಾಡಿದ ಚಾಲೆಂಜಿಂಗ್‌ ಸ್ಟಾರ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 5:41 IST
Last Updated 2 ಏಪ್ರಿಲ್ 2019, 5:41 IST
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ನಟ ದರ್ಶನ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ತೆರೆ ವಾಹನದಲ್ಲಿ ಪ್ರಚಾರ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ನಟ ದರ್ಶನ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ತೆರೆ ವಾಹನದಲ್ಲಿ ಪ್ರಚಾರ ನಡೆಸಿದರು   

ಶ್ರೀರಂಗಪಟ್ಟಣ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕಿಳಿದಿರುವ ನಟ ದರ್ಶನ್ ಸೋಮವಾರ ಒಂದೇ ದಿನ 28 ಗ್ರಾಮಗಳಲ್ಲಿ ರೋಡ್ ಷೋ ನಡೆಸಿದರು.

ಕೆಆರ್‌ಎಸ್‌ನಲ್ಲಿ ರೋಡ್ ಷೋ ಮೂಲಕ ಪ್ರಚಾರದ ಮ್ಯಾರಾಥಾನ್ ಆರಂಭಿಸಿದ ಅವರು ಮಧ್ಯಾಹ್ನ 3 ಗಂಟೆ ವೇಳೆಗೆ 15 ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ನೆತ್ತಿ ಸುಡುವ ಉರಿ ಬಿಸಿಲನ್ನೂ ಲೆಕ್ಕಿಸದೆ ಅವರು ಹುಮ್ಮಸ್ಸಿನಿಂದ ಪ್ರಚಾರ ನಡೆಸಿದರು. ತೆರೆದ ವಾಹನ ಏರಿದ ದರ್ಶನ್ ಮೇಳಾಪುರ, ಚಂದಗಾಲು, ಹೊಸೂರು, ತರೀಪುರ, ಮಹದೇವಪುರ, ಚನ್ನಹಳ್ಳಿ, ಹೆಬ್ಬಾಡಿ, ಹೆಬ್ಬಾಡಿಹುಂಡಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಕೆಲವೆಡೆ ನಿಂತು ಸಮುಲತಾ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರೆ, ಸಣ್ಣ ಸಣ್ಣ ಗ್ರಾಮಗಳಲ್ಲಿ ನೆರೆದಿದ್ದವರಿಗೆ ಕೈ ಮುಗಿಯುತ್ತಾ ಮುಂದೆ ನಡೆದರು. ದರ್ಶನ್ ಹೋದೆಡೆಯಲ್ಲಿ ಡಿ ಬಾಸ್ ಘೋಷಣೆಗಳು ಕೇಳಿ ಬಂದವು.

ಅಂಬಿ–ದರ್ಶನ್ ಕುರಿತು ಕವನ ವಾಚನ: ತಾಲ್ಲೂಕಿನ ಮೇಳಾಪುರ ಗ್ರಾಮದಲ್ಲಿ ದರ್ಶನ್ ಪ್ರಚಾರ ಮಾಡುವ ವೇಳೆ ಪರಮೇಶ್ ಎಂಬವರ ಪುತ್ರಿ, ಮೈಸೂರು ಜೆಸ್ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂ.ಪಿ. ಪೂಜಾ ಎಂಬವವರು ಅಂಬರೀಷ್ ಮತ್ತು ದರ್ಶನ್ ಕುರಿತು ಕವನ ವಾಚಿಸಿ ಗಮನ ಸೆಳೆದರು. ಅಂಬರೀಷ್ ಮತ್ತು ದರ್ಶನ್ ಅವರು ನಟಿಸಿರುವ ಚಿತ್ರಗಳ ಹೆಸರನ್ನು ಬಳಸಿಕೊಂಡು ಕವನ ಬರೆದು ಓದಿದರು. ಕವನ ಕೇಳಿ ಪುಳಕಿತರಾದ ದರ್ಶನ್ ಆ ಕವನದ ಫೋಟೊ ಕ್ಲಿಕ್ಕಿಸಿಕೊಂಡರು. ಪೂಜಾ ಅವರಿಗೆ ಬೆನ್ನು ತಟ್ಟಿ ಅಭಿನಂದಿಸಿದರು.

ADVERTISEMENT

ವಾಹನ ಪಂಕ್ಚರ್: ದರ್ಶನ್ ಪ್ರಚಾರ ಮಾಡುತ್ತಿದ್ದ ವಾಹನ ತಾಲ್ಲೂಕಿನ ಹೆಬ್ಬಾಡಿಹುಂಡಿ ಬಳಿ ಪಂಕ್ಚರ್ ಆಯಿತು. ಹಿಂದೆ ಬರುತ್ತಿದ್ದ ಮತ್ತೊಂದು ವಾಹನ ಏರಿ ದರ್ಶನ್ ಪ್ರಚಾರ ಮುಂದುವರಿಸಿದರು. ಆದರೂ ಪ್ರತಿ ಗ್ರಾಮಗಳಲ್ಲಿ ದರ್ಶನ್ ಬರುವಿಕೆಗಾಗಿ ಜನರು ಕಾದು ಕುಳಿತಿದ್ದು ಸಂಭ್ರಮದಿಂದ ಸ್ವಾಗತಿಸಿದರು.

ಹುಲಿಕೆರೆಯಲ್ಲಿ ಮಾತನಾಡಿದ ದರ್ಶನ್ 'ಕಣದಲ್ಲಿ ನಾಲ್ಕು ಮಂದಿ ಸುಮಲತಾ ಹೆಸರಿನ ಅಭ್ಯರ್ಥಿಗಳು ಇದ್ದಾರೆ. ಕ್ರಮ ಸಂಖ್ಯೆ 20ರ ಎ.ಸುಮಲತಾ ಎಂಬ ಹೆಸರಿಗೆ ಮತ ಹಾಕಬೇಕು. ಕಾರ್ಯಕರ್ತರು ವೃದ್ಧರು ಮತ್ತು ಅನಕ್ಷರಸ್ಥರಿಗೆ ಸರಿಯಾದ ಮಾಹಿತಿ ನೀಡಿ ಸುಮಲತಾ ಅವರಿಗೆ ಮತ ಹಾಕಿಸಿ ಗೆಲ್ಲಿಸಬೇಕು' ಎಂದು ಹೇಳಿದರು.

ದರ್ಶನ್ ಮತ್ತು ಯಶ್ ಅವರಿಗೇಕೆ ರಾಜಕೀಯ ಎಂಬ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಪ್ರಶ್ನೆಗೆ ದಾರಿ ಮಧ್ಯೆ ಪ್ರತಿಕ್ರಿಯಿಸಿದ ದರ್ಶನ್, ಶಿವರಾಮೇಗೌಡ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಏ.18ರಂದು ನೀವೇ ಅವರಿಗೆ ಉತ್ತರ ಕೊಡಿ ಎಂದು ಹೇಳಿದರು.

ಹೊಂಗೆ ಮರದಡಿ ಊಟ

ಮಧ್ಯಾಹ್ನ ನಗುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳವಾಡಿ ಬಳಿ ರಸ್ತೆ ಬದಿಯ ಹೊಂಗೆ ಮರದ ಕೆಳಗೆ ಕುಳಿತು ದರ್ಶನ್‌ ಊಟ ಮಾಡಿದರು. ಈ ಸಂದರ್ಭದಲ್ಲಿ ಅವರ ಸುತ್ತಲೂ ಅಭಿಮಾನಿಗಳು ನೆರೆದಿದ್ದರು. ಬಿಸಿಲಿನ ಬೇಗೆಯಿಂದ ಬಳಲಿದ್ದ ಅವರು ಹೊಂಗೆ ಮರದಡಿಯ ತಂಪು ಅನುಭವಿಸಿದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಊಟ ಸವಿದರು.

ನಿಖಿಲ್‌ ಪರ ಜೈಕಾರ: ಮನವೊಲಿಕೆ

ಶ್ರೀರಂಗಪಟ್ಟಣ: ಸಮಯದ ಅಭಾವದಿಂದ ಕೊಕ್ಕರೆಹುಂಡಿ ಗ್ರಾಮದೊಳಗೆ ಬರಲು ದರ್ಶನ್‌ ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡ ಜನರು ಊರೊಳಗೆ ಬರಲೇಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲವರು ನಿಖಿಲ್‌ ಕುಮಾರಸ್ವಾಮಿ ಪರ ಜೈಕಾರ ಕೂಗಿದರು. ನಂತರ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ದರ್ಶನ್‌ ಗ್ರಾಮದಲ್ಲಿ ರೋಡ್‌ ಷೋ ನಡೆಸಿ ಮತಯಾಚನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.