ADVERTISEMENT

ಎಸ್‌.ಸಿ, ಎಸ್.ಟಿ. ಅನುದಾನ ದುರ್ಬಳಕೆ ಆರೋಪ: ಸಿಎಂ ರಾಜೀನಾಮೆಗೆ ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:23 IST
Last Updated 8 ಜುಲೈ 2024, 15:23 IST

ಮಂಡ್ಯ: ಎಸ್.ಸಿ, ಎಸ್.ಟಿ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಹಣ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು. 

ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಭ್ರಷ್ಟಾಚಾರ ಮಾಡಿದ್ದು, ಇದರ ಆರ್ಥಿಕ ಅಶಿಸ್ತಿನ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದರು.

‘ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹39,121,46 ಕೋಟಿ ಅನುದಾನ ಬಳಕೆಗೆ ಕ್ರಿಯಾ ಯೋಜನೆಗೆ 4 ತಿಂಗಳು ಕಳೆದರೂ ಎಸ್ಸಿ, ಎಸ್ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಕರೆದು ಅನುಮೋದಿಸದೆ ಕಳೆದ ಶುಕ್ರವಾರ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳಿಗೆ ₹14.282 ಕೋಟಿ ವರ್ಗಾಯಿಸಲು ತೀರ್ಮಾನಿಸಿರುವ ಮುಖ್ಯಮಂತ್ರಿಯ ನಡೆ ಪರಿಶಿಷ್ಟ ವಿರೋಧಿ ಧೋರಣೆ’ ಎಂದು ಆಕ್ರೋಶ ವ್ಯಕ್ತಡಿಸಿದರು.

ADVERTISEMENT

‘ಪರಿಶಿಷ್ಟ ವಿರೋಧಿ ಧೋರಣೆಯ ಅನ್ಯಾಯವನ್ನು ತಡೆಯಲಾಗದ ರಾಜ್ಯ ಆಡಳಿತ ಪಕ್ಷದ ಪರಿಶಿಷ್ಟ ಮಂತ್ರಿ, ಶಾಸಕರು ಮತ್ತು ವಿರೋಧ ಪಕ್ಷದಲ್ಲಿನ ಪರಿಶಿಷ್ಟ ಶಾಸಕರುಗಳೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಸ್.ಸಿ, ಎಸ್.ಟಿ/ ಟಿ.ಎಸ್‌.ಪಿ ಅನುದಾನದ ₹24,282 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲ್ಪಟ್ಟ ಅನುದಾನವನ್ನು ಮತ್ತು ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ₹187 ಕೋಟಿ ಹಾಗೂ ಕಳೆದ ಹತ್ತು ವರ್ಷಗಳಿಂದಲೂ ಸರ್ಕಾರವೇ ವಾಪಸ್ಸು ಪಡೆದುಕೊಂಡಿರುವ ₹80 ಸಾವಿರ ಕೋಟಿ ಸೇರಿ ಒಟ್ಟು ₹105,469 ಕೋಟಿ ಅನುದಾನವನ್ನು ಮತ್ತೆ ಸೇರಿಸಿ ರಾಜ್ಯ ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ತಲಾ ₹25 ಲಕ್ಷದಂತೆ ರಾಜ್ಯಸರ್ಕಾರ ಹಂಚಿಕೆ ಮಾಡಬೇಕು ಎಂದು ಆಗ್ರಹ ಪಡಿಸಿದರು.

‘ಎಸ್.ಸಿ, ಎಸ್.ಟಿ./ಟಿ.ಎ.ಎಸ್‌.ಪಿ ಅನುದಾನದ ಸದ್ಭಳಕೆ ಮಾಡದೆ, ದುರ್ಬಳಕೆ ಮಾಡಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನಾ ಕಾಯ್ದೆ(2013) ಅನ್ವಯ ಕ್ರಿಮಿನಲ್ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಭ್ರಷ್ಟಾಚಾರ ಮಾಡಿಸಿ, ಎಸ್‌ಐಟಿ ತನಿಖೆ ನಾಟಕವಾಡುತ್ತಿರುವ ರಾಜ್ಯ ಸರ್ಕಾರವೇ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಬಿ.ಆನಂದ್, ಸುರೇಶ್ ಮರಳಗಾಲ, ಮರಂಕಯ್ಯ, ಅನಿಲ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.