ADVERTISEMENT

ನಾಗಮಂಗಲ | ಮದುವೆ ದಿಬ್ಬಣದ ‘ಗೊಂಬೆ ಪ್ರದರ್ಶನ’

ರೇಷ್ಮೆಗೂಡಿನಲ್ಲಿ ಅರಳಿದ ರಾಮನ ಪಟ್ಟಾಭಿಷೇಕ

ಉಲ್ಲಾಸ್.ಯು.ವಿ
Published 8 ಅಕ್ಟೋಬರ್ 2024, 6:36 IST
Last Updated 8 ಅಕ್ಟೋಬರ್ 2024, 6:36 IST
ನಾಗಮಂಗಲ ತಾಲ್ಲೂಕಿನ ದೊಡ್ಡಾಬಾಲ ಗ್ರಾಮದ ಎಸ್.ಪಿ. ರಾಧಾ ರಂಗರಾಜನ್ ಮತ್ತು ಎಸ್.ಪಿ. ವಿಜಯಾ ಸಂಪತ್ ಕುಮಾರ್ ಎಂಬ ವಾರಗಿತ್ತಿಯರು ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸಿದ್ದಾರೆ 
ನಾಗಮಂಗಲ ತಾಲ್ಲೂಕಿನ ದೊಡ್ಡಾಬಾಲ ಗ್ರಾಮದ ಎಸ್.ಪಿ. ರಾಧಾ ರಂಗರಾಜನ್ ಮತ್ತು ಎಸ್.ಪಿ. ವಿಜಯಾ ಸಂಪತ್ ಕುಮಾರ್ ಎಂಬ ವಾರಗಿತ್ತಿಯರು ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸಿದ್ದಾರೆ    

ನಾಗಮಂಗಲ: ತಾಲ್ಲೂಕಿನ ದೊಡ್ಡಾಬಾಲ ಗ್ರಾಮದ ಎಸ್.ಪಿ.ರಾಧಾ ರಂಗರಾಜನ್ ಮತ್ತು ಎಸ್.ಪಿ. ವಿಜಯಾ ಸಂಪತ್ ಕುಮಾರ್ ವಾರಗಿತ್ತಿಯರು ತಮ್ಮ ಮನೆಯಲ್ಲಿ ಸಂಗ್ರಹಿಸಲಾಗಿರುವ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಬಳಸಿಕೊಂಡು ದಸರಾದ ಅಂಗವಾಗಿ ‘ಗೊಂಬೆಗಳ ಲೋಕ’ ಸೃಷ್ಟಿಸಿದ್ದಾರೆ. 

40 ವರ್ಷಗಳಿಂದ ವಾರಗಿತ್ತಿಯರಿಬ್ಬರೂ ಕೂಡಿಕೊಂಡು ಗೊಂಬೆಗಳ ಪ್ರದರ್ಶನ ಏರ್ಪಡಿಸುತ್ತಿದ್ದು, ಪ್ರತಿ ವರ್ಷವೂ ವಿಭಿನ್ನ ಪರಿಕಲ್ಪನೆಯಲ್ಲಿ ಗೊಂಬೆ ಪ್ರದರ್ಶನ ಮಾಡುತ್ತಿದ್ದಾರೆ.

ಈ ಬಾರಿ ಮದುವೆ ದಿಬ್ಬಣದ ಪರಿಕಲ್ಪನೆಯಲ್ಲಿ ಗೊಂಬೆಗಳ ಪ್ರದರ್ಶನ ಆಯೋಜಿಸಿದ್ದಾರೆ. ‌ಪಂಚಲೋಹ, ಹಿತ್ತಾಳೆ, ತಾಮ್ರದ ಸುಮಾರು 80 ವರ್ಷಗಳ ಹಳೆಯ ಗೊಂಬೆಗಳನ್ನು ಸಂಗ್ರಹಿಸಿದ್ದಾರೆ. 

ADVERTISEMENT

ಈ ಬಾರಿ ಪಿಸ್ತಾ ಬೀಜ, ಕರಬೂಜದ ಬೀಜ, ಅಡಿಕೆ ಕಾಯಿಗಳನ್ನು ಬಳಸಿ ಲಕ್ಷ್ಮೀ ನಾರಾಯಣ ಗೊಂಬೆಗಳನ್ನು ತಯಾರು ಮಾಡಲಾಗಿದೆ. ಜೊತೆಗೆ ರಾಮನ ಪಟ್ಟಾಭಿಷೇಕ ಸನ್ನಿವೇಶದ ಗೊಂಬೆಗಳನ್ನು ರೇಷ್ಮೆಗೂಡು ಸೇರಿದಂತೆ ಇತರ ವಸ್ತುಗಳನ್ನು ಬಳಸಿ ತಯಾರು ಮಾಡಿರುವುದು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.

10 ದಿನಗಳವರೆಗೆ ಬೆಳಿಗ್ಗೆ 10 ರಿಂದ ಸಂಜೆ 8ರವರೆಗೂ ವೀಕ್ಷಣೆಗೆ ಅವಕಾಶ ನೀಡಿದ್ದಾರೆ. ಇವರ ಮಕ್ಕಳು ಮತ್ತು ಸಂಬಂಧಿಕರು ವಿದೇಶಗಳಲ್ಲಿ ಇರುವುದರಿಂದ ಹಲವಾರು ದೇಶಗಳ ಗೊಂಬೆಗಳನ್ನು ಸಂಗ್ರಹ ಮಾಡಿದ್ದಾರೆ. ಪಟ್ಟದ ರಾಜರಾಣಿಯ ಗೊಂಬೆಗಳನ್ನು ವಿಜಯದಶಮಿ ಹಬ್ಬದ ರಾತ್ರಿ ಅವುಗಳನ್ನು ಮಲಗಿಸುವ ಮೂಲಕ ಪ್ರದರ್ಶನ ಕೊನೆಗೊಳ್ಳಲಿದೆ.

‘ನಾವು ಮಕ್ಕಳಾಗಿದ್ದಾಗಿನಿಂದಲೂ ನಮ್ಮ ತವರು ಮನೆಯಲ್ಲಿ ಪ್ರತಿ ವರ್ಷವೂ ದಸರಾದಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದರು. ಮದುವೆಯಾದ ನಂತರ ತವರು ಮನೆಯಿಂದ ಪಟ್ಟದ ಗೊಂಬೆಗಳನ್ನು ಕೊಟ್ಟಿದ್ದರು. ಅಂದಿನಿಂದಲೂ ನಿರಂತರವಾಗಿ ಗೊಂಬೆಗಳ ಪ್ರದರ್ಶನ ಮಾಡುತ್ತಾ ಬರುತ್ತಿದ್ದೇವೆ’ ಎಂದು ಎಸ್.ಪಿ.ರಾಧಾ ರಂಗರಾಜನ್ ಹೇಳಿದರು.

80 ವರ್ಷಗಳಷ್ಟು ಹಳೆಯ ಬೊಂಬೆಗಳ ಸಂಗ್ರಹ ಪಟ್ಟದ ರಾಜರಾಣಿಯ ಗೊಂಬೆಗಳ ಆಕರ್ಷಣೆ 40 ವರ್ಷಗಳಿಂದ ನಿರಂತರ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.