ADVERTISEMENT

ಮದ್ದೂರು ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:26 IST
Last Updated 20 ಜುಲೈ 2024, 14:26 IST
ಮದ್ದೂರಿನ ಪುರಸಭೆಯ ಎಸ್. ಎಂ ಕೃಷ್ಣ ಸಭಾಂಗಣದಲ್ಲಿ ಶನಿವಾರ ವಿಶೇಷ ಸಭೆಯು ನಡೆಯಿತು, ಶಾಸಕ ಕದಲೂರು ಉದಯ್,ಉಪವಿಭಾಗಾಧಿಕಾರಿ ಶಿವಮೂರ್ತಿ, ಪುರಸಭಾ ಮುಖ್ಯ್ಯಾಧಿಕಾರಿ ಮೀನಾಕ್ಷಿ, ಸದಸ್ಯರುಗಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಮದ್ದೂರಿನ ಪುರಸಭೆಯ ಎಸ್. ಎಂ ಕೃಷ್ಣ ಸಭಾಂಗಣದಲ್ಲಿ ಶನಿವಾರ ವಿಶೇಷ ಸಭೆಯು ನಡೆಯಿತು, ಶಾಸಕ ಕದಲೂರು ಉದಯ್,ಉಪವಿಭಾಗಾಧಿಕಾರಿ ಶಿವಮೂರ್ತಿ, ಪುರಸಭಾ ಮುಖ್ಯ್ಯಾಧಿಕಾರಿ ಮೀನಾಕ್ಷಿ, ಸದಸ್ಯರುಗಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.   

ಮದ್ದೂರು: ಪಟ್ಟಣದ ಪೇಟೆಬೀದಿಯನ್ನು 100 ಅಡಿಗಳಿಗೆ ವಿಸ್ತರಿಸಲು ಶನಿವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಶನಿವಾರ ಪುರಸಭೆಯ ಎಸ್. ಎಂ. ಕೃಷ್ಣ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಕುರಿತಂತೆ ತೀರ್ಮಾನಿಸಿ ಸಭೆಯಲ್ಲಿ ಹಾಜರಿದ್ದ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆಗೆ ಬಂದಾಗ ಕೆಲವು ಸದಸ್ಯರು 100 ಅಡಿ ಹಾಗೂ ಕೆಲವರು 120 ಅಡಿ ವಿಸ್ತರಿಸಲು ತಮ್ಮ ಅಭಿಪ್ರಾಯ ಸೂಚಿಸಿದ್ದರ ಹಿನ್ನೆಲೆಯಲ್ಲಿ, ಶಾಸಕ ಕದಲೂರು ಉದಯ್ ಅವರು ಮಧ್ಯ ಪ್ರವೇಶಿಸಿ ಮುಂದಿನ ಭವಿಷ್ಯದ ವಿಷಯದ ವಿಷಯದಲ್ಲಿ ಚಿಂತಿಸಿ 120 ಅಡಿಗಳಷ್ಟು ವಿಸ್ತರಿಸಿದರೆ ಪಟ್ಟಣದ ಅಭಿವೃದ್ಧಿಯಾಗುತ್ತದೆಯ್ಯಾದ್ದರಿಂದ ಮುಂದಿನ ವಿಶೇಷ ಸಭೆಯಲ್ಲಿ ಈ ಬಗ್ಗೆ ತಿಳಿಸಲು ಹೇಳಿದ್ದರು, ಆ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ADVERTISEMENT

ಪಟ್ಟಣದಲ್ಲಿ ಪೇಟೆಬೀದಿ ವಿಸ್ತರಣೆಯಾಗುವಷ್ಟರಲ್ಲಿ ಸುಸಜ್ಜಿತ ಹೂವು, ತರಕಾರಿ ಹಾಗೂ ಮಾಂಸ ಮೀನು ಮಾರುಕಟ್ಟೆಯನ್ನು ನಿರ್ಮಿಸುವ ಬಗ್ಗೆ ವಿಷಯ ಚರ್ಚೆಗೆ ಬಂದಾಗ ಸದಸ್ಯರು ನಿರ್ಮಿಸಲು ಒಪ್ಪಿಗೆ ಸೂಚಿಸಿದ ನಂತರ ಶಾಸಕ ಉದಯ್ ಮಾತನಾಡಿ, ‘ಈ ಬಗ್ಗೆ ಸ್ಥಳವನ್ನು ಗೊತ್ತು ಮಾಡಿದ ನಂತರ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು’ ಎಂದರು.

ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಯು ಸಮರ್ಪಕವಾಗಿ ನಡೆಯುತ್ತಿಲ್ಲ, ಈ ಬಗ್ಗೆ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತಾರದೇ ಹಾಗೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯರಾದ ಪ್ರವೀಣ್, ಸುರೇಶ್, ಪ್ರಸನ್ನ ಸಿದ್ದು, ಸಚ್ಚಿನ್, ತನುಜಾ, ವನಿತಾ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂಧರ್ಭದಲ್ಲಿ ಶಾಸಕ ಕದಲೂರು ಉದಯ್ ಮಧ್ಯ ಪ್ರವೇಶಿಸಿ ಮಾತನಾಡಿ, ‘ಕೂಡಲೇ ದಿನಕ್ಕೆ 3 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಪುರಸಭಾ ಸದಸ್ಯರನ್ನು ಕರೆಸಿಕೊಂಡು ಆಗಬೇಕಿರುವ ಕೆಲಸಗಳ ಬಗ್ಗೆ ಅವರಿಂದ ಮಾಹಿತಿ ಪಡೆದು ಗೊಂದಲ ಪರಿಹರಿಸಿ ಸಮರ್ಪಕ ಕಾಮಗಾರಿಯನ್ನು ನಡೆಸುವಂತೆ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಸಕ ಕದಲೂರು ಉದಯ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಪುರಸಭಾ ಮುಖ್ಯ್ಯಾಧಿಕಾರಿ ಮೀನಾಕ್ಷಿ, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.