ADVERTISEMENT

ಸೋಲನ್ನು ಸವಾಲಾಗಿ ಸ್ವೀಕರಿಸುವೆ: ಬಿ.ಎನ್‌.ಚಂದ್ರಪ್ಪ

ತಾಂತ್ರಿಕವಾಗಿ ಸೋತರೂ ಮಾನಸಿಕವಾಗಿ ಗೆಲುವು, ಮತದಾರರಿಗೆ ಕೃತಜ್ಞತೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:52 IST
Last Updated 19 ಜೂನ್ 2024, 13:52 IST
ಬಿ.ಎನ್‌.ಚಂದ್ರಪ್ಪ
ಬಿ.ಎನ್‌.ಚಂದ್ರಪ್ಪ   

ಚಿತ್ರದುರ್ಗ: ‘ಈ ನೆಲವೇ ನನ್ನ ಕರ್ಮಭೂಮಿ, ಲೋಕಸಭಾ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾನು ಬೆನ್ನು ತೋರಿಸಿ ಓಡಿ ಹೋಗುವುದಿಲ್ಲ. ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಬುಧವಾರ ಹೇಳಿದರು.

‘ರಾಜ್ಯದ ಎಲ್ಲಾ ಸಮೀಕ್ಷೆಗಳೂ ನಾನು ಗೆಲ್ಲುವುದಾಗಿ ತಿಳಿಸಿದ್ದವು, ಆದರೆ ಅಂತಿಮ ಫಲಿತಾಂಶದಲ್ಲಿ ನಾನು ಸೋಲು ಕಂಡಿದ್ದೇನೆ. ಈ ಸೋಲು ಅನಿರೀಕ್ಷಿತವಾಗಿದ್ದು ಎಲ್ಲರಲ್ಲೂ ಆಶ್ಚರ್ಯ ತರಿಸಿದೆ. ಈ ಸೋಲಿನ ಕಾರಣಕ್ಕಾಗಿ ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ. ಸೋತರೂ ಜನರ ಜೊತೆಗಿದ್ದು ಬದ್ಧತೆ ತೋರಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು 3 ಲೋಕಸಭಾ ಚುನಾವಣೆ ಎದುರಿಸಿದ್ದೇನೆ. ಮೊದಲ ಚುನಾವಣೆ ಗೆಲುವು ಸಾಧಿಸಿದ್ದೆ. 2ನೇ ಚುನಾವಣೆಯಲ್ಲಿ ಸೋತರೂ ಹೆಚ್ಚುವರಿಯಾಗಿ 1 ಲಕ್ಷದಷ್ಟು ಮತ ಗಳಿಸಿದ್ದೇನೆ. ಈ ಚುನಾವಣೆಯಲ್ಲಿ ಜನರು ಇನ್ನೂ ಒಂದು ಲಕ್ಷ ಹೆಚ್ಚುವರಿ ಮತ ನೀಡಿದ್ದಾರೆ. ಹೀಗಾಗಿ ಕ್ಷೇತ್ರದ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲೂ ತಾಂತ್ರಿಕವಾಗಿ ಸೋತರೂ ಮಾನಸಿಕವಾಗಿ ಗೆಲವು ಸಾಧಿಸಿದ್ದೇನೆ. ಮುಂದೆಯೂ ಕ್ಷೇತ್ರದ ಜನರ ಮನೆಮಗನಾಗಿ ಇರುತ್ತೇನೆ’ ಎಂದರು.

ADVERTISEMENT

‘ಮುಂದಿನ 4 ವರ್ಷಗಳವರೆಗೆ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಇರಲಿದ್ದು ಜನರ ಪರವಾಗಿ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ಗೆಲುವಿಗಾಗಿ ರಕ್ಷಾ ಕವಚವಾಗಿ ಕೆಲಸ ಮಾಡಲಿವೆ ಎಂಬ ನಿರೀಕ್ಷೆ ಇತ್ತು, ಆದರೆ ಹಾಗಾಗಿಲ್ಲ. ಚುನಾವಣೆ ಗೆಲುವಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ’ ಎಂದರು.

‘ಬಿಜೆಪಿ– ಜೆಡಿಎಸ್‌ ಮೈತ್ರಿ ಗೋವಿಂದ ಕಾರಜೋಳ ಅವರ ಗೆಲುವಿಗೆ ಪ್ರಮುಖ ಕಾರಣವಿರಬಹುದು. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿ ಇದ್ದರೂ ನಮಗೆ ಸೋಲಾಗಿದೆ. ಜನರು ಕೋಮುವಾದಿ ಬಿಜೆಪಿಯನ್ನು ತಿರಸ್ಕಾರ ಮಾಡುತ್ತಾರೆ ಎಂಬ ಭಾವನೆ ಇತ್ತು’ ಎಂದರು.

‘ನೂತನ ಸಂಸದ ಗೋವಿಂದ ಕಾರಜೋಳ ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ. ಜಿಲ್ಲೆಯ ಪರವಾಗಿ ಯಾವುದೇ ಉತ್ತಮ ಕೆಲಸ ಮಾಡಿದರೂ ಅವರಿಗೆ ನಾವು ಸಹಕಾರ ನೀಡುತ್ತೇವೆ. ಆದರೆ ಬಿಜೆಪಿ ಸರ್ಕಾರದಿಂದ ಜಿಲ್ಲೆಗೆ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಸದಾನಂದಗೌಡ, ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ಸಚಿವರಾದರೂ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಒಂದೂ ಯೋಜನೆ ತರಲು ಸಾಧ್ಯವಾಗಿಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಮಹೇಶ್‌, ನಗರ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ್‌, ಗ್ರಾಮಾಂತರ ಘಟಕದ ಅಧ್ಯಕ್ಷ ಪ್ರಕಾಶ್‌, ಮುಖಂಡರಾದ ಮರಳಾರಾಧ್ಯ, ರವಿ, ಆಂಜಿನಪ್ಪ, ಮದ್ದಶೀರ್‌ ನವಾಜ್‌, ಬಾಲಕೃಷ್ಣ ಯಾದವ್‌, ರವಿಕುಮಾರ್‌ ಇದ್ದರು. 

ಗೆಲುವಿಗೆ ಮಾನದಂಡ ಏನು?

‘ಕ್ಷೇತ್ರದ ಜನರು ಮುಖಂಡರ ಜೊತೆಗೆ ನಾನು ಅವಿನಾಭಾವ ಸಂಬಂಧ ಹೊಂದಿದ್ದೆ ಎಂದಿಗೂ ಜಾತಿ ಬೇಧ ಮಾಡಲಿಲ್ಲ ಯಾರ ನಡುವೆಯೂ ತಾರತಮ್ಯ ಮಾಡಲಿಲ್ಲ. ನನ್ನ ವಿರುದ್ಧ ಯಾವ ಆರೋಪವೂ ಇರಲಿಲ್ಲ ಆದರೂ ನನಗೆ ಸೋಲಾಯಿತು. ನಾನು ಯಾವ ರೀತಿ ಇರಬೇಕು ಯಾವ ರೀತಿ ನಡೆದುಕೊಳ್ಳಬೇಕು ಗೆಲುವಿಗೆ ಮಾನದಂಡ ಯಾವುದು ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ’ ಎಂದು ಚಂದ್ರಪ್ಪ ನೋವು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.