ADVERTISEMENT

ಮಂಡ್ಯ: ಟನ್ ಕಬ್ಬಿಗೆ ₹5,500 ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 13:13 IST
Last Updated 4 ಅಕ್ಟೋಬರ್ 2024, 13:13 IST

ಮಂಡ್ಯ: ಕಲಬುರಗಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ 13 ನಿರ್ಣಯಗಳನ್ನು ಅಂಗೀಕಾರ ಮಾಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಿ ಜಾರಿಗೆ ಒತ್ತಾಯಿಸಲಾಗುವುದು ಎಂದು ಸಂಘದ ರಾಜ್ಯ ಪ‍್ರಧಾನ ಕಾರ್ಯದರ್ಶಿ ಎನ್‌.ಎಲ್‌.ಭರತ್‌ರಾಜ್‌ ಹೇಳಿದರು.

ಕರ್ನಾಟಕ ಕಬ್ಬು ಕಾಯ್ದೆ 2023ನ್ನು ರದ್ದುಪಡಿಸಿ ರಾಜ್ಯ ಸಲಹಾ ಬೆಲೆ(ಎಸ್‌ಎಪಿ) ಪುನರ್ ಪರಿಶೀಲನೆ ಮಾಡಿ ಟನ್ ಕಬ್ಬಿಗೆ ₹5,500 ಎಫ್‌ಆರ್‌ಪಿ ನಿಗದಿಪಡಿಸಬೇಕು. ಕರ್ನಾಟಕ ಕಬ್ಬು ಕಾಯ್ದೆ 2023 ಹಿಂದೆ ಇದ್ದ ರಾಜ್ಯ ಸಲಹಾ ಬೆಲೆಯನ್ನು ಪುನರ್ ಸ್ಥಾಪಿಸಿ ಕಬ್ಬಿಗೆ 9.5 ರಷ್ಟು ಇಳುವರಿ ಆಧಾರದಲ್ಲಿ ₹5,500 ನಿಗದಿ ಮಾಡಬೇಕೆಂದು ನಿರ್ಣಯಿಸಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

2024ರಲ್ಲಿ ಜಾರಿಗೊಳಿಸಿರುವ ಸಕ್ಕರೆ ನಿಯಂತ್ರಣ ಮಂಡಳಿ ಆದೇಶ ವಾಪಸ್ ಪಡೆಯಬೇಕು. ಹರಿಯಾಣ, ಪಂಜಾಬ್ ಮಾದರಿ 8.1 ರಷ್ಟು ಇಳುವರಿ ನೀಡುವ ಕಬ್ಬಿಗೆ ₹900 ರಾಜ್ಯ ಸಲಹಾ ಬಲೆ (ಎಸ್‌ಎಪಿ) ನಿಗದಿ ಪಡಿಸಿ, ರೆವೆನ್ಯೂ ಶೇರಿಂಗ್ ಫಾರ್ಮುಲಾ ರದ್ದು ಮಾಡಬೇಕೆಂಬುದು ಸೇರಿ ಒಟ್ಟು 13 ನಿರ್ಣಯಗಳ ಅಂಗೀಕಾರ ಮಾಡಲಾಗಿದೆ. ಇವು ಜಾರಿಗೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ವಿವರಿಸಿದರು.

ADVERTISEMENT

ತಮಿಳುನಾಡಿ ಕಬ್ಬು ಬೆಳೆಗಾರರ ಸಂಘವು ತಮಿಳುನಾಡಿನಲ್ಲಿ ಬೈಂಡಿಂಗ್ ವೇಸ್ಟೇಜನ್ನು ಹೆಚ್ಚಾಗಿ ಕಡಿತ ಮಾಡಿದ್ದರ ವಿರುದ್ಧ ಹೋರಾಟ ನಡೆಸಿ 1966ರ 3ಎ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ₹150 ಕೋಟಿ ರೈತರಿಗೆ ಕೊಡಿಸಿದ್ದು, ಸದರಿ ಸಂಘಕ್ಕೆ ಕರ್ನಾಟಕ ಸಂಘದಿಂದ ಅಭಿನಂದನೆ ಸಲ್ಲಿಸುತ್ತೇವೆ, ನಮ್ಮ ರಾಜ್ಯದಲ್ಲಿಯೂ ರೈತರಿಗೆ ಅನ್ಯಾಯವಾಗುವುದನ್ನು ತಡೆದು ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.

ಪದಾಧಿಕಾರಿಗಳ ಆಯ್ಕೆ: ಸಮ್ಮೇಳನದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷರಾಗಿ ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎಲ್.ಭರತ್‌ರಾಜ್, ಉಪಾಧ್ಯಕ್ಷರಾಗಿ ಬೆಳಗಾವಿ ಚಂದ್ರಗೌಡ ಕಲ್ಲನಗೌಡ ಪಾಟೀಲ್, ಕಲಬುರಗಿಯ ಶರಣಬಸಪ್ಪ ಮಮಶೆಟ್ಟಿ, ಬಾಗಲಕೋಟೆ ರುದ್ರಗೌಡ ನ್ಯಾಮಗೌಡ, ಮಂಡ್ಯ ಕುಳ್ಳೇಗೌಡ, ಸಹ ಕಾರ್ಯದರ್ಶಿಗಳಾಗಿ ವಿಜಯಪುರದ ಬೀಮರಾಯ, ಕಲಬುರಗಿ ಶ್ರೀಮಂತ ಬೀರೆದಾರ, ಕೊಪ್ಪಳ ಚಂದ್ರಶೇಖರ ಸಂಗಪ್ಪ, ಕಲಬುರಗಿ ಸಿದ್ದರಾಮ ದಣ್ಣೂರ, ಸದಸ್ಯರಾಗಿ ಕೊಟ್ಟಿಗೆ ಮಲ್ಲಿಕಾರ್ಜುನ, ಶಕೂರ್, ಶ್ರೀನಿವಾಸ್, ಅವಿನಾಶ ಸಾರಥಿ, ಮಲ್ಲಿಕಾರ್ಜುನ ಸಾವುಕಾರ್ ಅವರು ಆಯ್ಕೆಯಾದರು.

ಸಂಘದ ಕುಳ್ಳೇಗೌಡ, ಶ್ರೀನಿವಾಸ್, ಶಕೂರ್, ಚಿಕ್ಕತಮ್ಮೇಗೌಡ, ಕೆಂಪರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.