ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 3ನೇ ದಿನಕ್ಕೆ ತಲುಪಿತು.
‘ಮೈಷುಗರ್ ಕಾರ್ಖಾನೆ ಖಾಸಗೀಕರಣ ಅನಿವಾರ್ಯ’ ಎಂದು ವಿಧಾನ ಪರಿಷತ್‌ನಲ್ಲಿ ಹೇಳಿರುವ ಮಾತನ್ನು ಸಮಿತಿ ಸದಸ್ಯರು ಖಂಡಿಸಿದರು. ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮೈಷುಗರ್ ಕಾರ್ಖಾನೆಯು ಕಳೆದ 85 ವರ್ಷಗಳಿಂದಲೂ ಉತ್ತಮ ಲಾಭ ತಂದುಕೊಟ್ಟಿದೆ. ಕಾರ್ಖಾನೆಯ ಆಸ್ತಿಯನ್ನು ಕಬಳಿಸುವ ನಿಟ್ಟಿನಲ್ಲಿ ಹಾಗೂ ಕಾರ್ಖಾನೆಯ ಲಾಭವನ್ನು ಪಡೆಯುವ ಹುನ್ನಾರದಿಂದ ನಿರಾಣಿ ಅವರು ಗುತ್ತಿಗೆಯ ಮಾತುಗಳನ್ನು ಆಡುತ್ತಿದ್ದಾರೆ, ತಕ್ಷಣ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡರ ಬೆಂಬಲ: 3ನೇ ದಿನ ಜೆಡಿಎಸ್ ಜೆಡಿಎಸ್ ಮುಖಂಡರು ಬೆಂಬಲ ಸೂಚಿಸಿದರು. ನಗರಸಭೆ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿ ಮಾಜಿ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ಮುಖಂಡ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಮೈಷುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಸರ್ಕಾರ ಬರೆದು ಕೊಡಬೇಕು. ಯಾವುದೇ ಕಾರಣಕ್ಕೂ ಖಾಸಗಿಗೆ ಗುತ್ತಿಗೆಗೆ ನೀಡಬಾರದು. ತಪ್ಪಿದರೆ ಹೋರಾಟ ನಿರಂತರವಾಗಿ ಮಾಡಲಾಗುವುದು. ಕಾರ್ಖಾನೆ ವಿಷಯದಲ್ಲಿ ನ್ಯಾಯ ಸಿಗುವ ವರೆಗೂ ಬೆಂಬಲ ನೀಡುತ್ತೇವೆ. ಸರ್ಕಾರದ ಗಮನ ಸೆಳೆಯುವ ತನಕ ಹೋರಾಟ ನಿರಂತರವಾಗಿರುತ್ತದೆ’ ಎಂದರು.
‘ಮೈಷುಗರ್ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ್ದು, ಇದು ಮಂಡ್ಯ ಜಿಲ್ಲೆಯ ಕಳಸವಿದ್ದಂತೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾರ್ಖಾನೆಯ ಆಸ್ತಿಯನ್ನು ಮಾರಲು ಹೊರಟಿರುವ ಸರ್ಕಾರದ ನೀತಿ ಖಂಡನೀಯವಾದುದು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ, ಹೊಸ ಕಾರ್ಖಾನೆ ಕಟ್ಟಲು ₹ 400 ಕೋಟಿ ಹಣ ಮೀಸಲಿಟ್ಟಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರಸ್ತುತ ಸರ್ಕಾರ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಹೊರಟಿದೆ’ ಎಂದು ಆರೋಪಿಸಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ನಗರ ಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ಜಿ.ಪಂ.ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಸುಧೀರ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.