ಮಂಡ್ಯ: ‘ಒಂಟಿ ಸಲಗದಂತೆ ಎಲ್ಲವನ್ನೂ ತುಳಿದುಕೊಂಡು ಓಡಾಡುತ್ತಿರುವ ಆರ್‌ಎಸ್‌ಎಸ್‌ನ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಉಳಿಗಾಲವಿಲ್ಲ. ಜನಸಮುದಾಯಗಳಿಗೆ ಧ್ವನಿಯಾಗಿರುವ ಜನಾಂದೋಲನಕ್ಕೆ ಧಕ್ಕೆ ಉಂಟಾಗಲಿದೆ. ಕುಂಟುತ್ತಿರುವ ಮಾಧ್ಯಮಗಳು ತೆವಳುವ ಪರಿಸ್ಥಿತಿ ಬರಲಿದೆ’ ಎಂದು ಲೇಖಕ ದೇವನೂರ ಮಹಾದೇವ ಎಚ್ಚರಿಸಿದರು.
ಕೆರಗೋಡು ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಏರ್ಪಡಿಸಿದ್ದ ‘ಶಾಂತಿ ಸೌಹಾರ್ದಕ್ಕಾಗಿ ಪ್ರತಿಭಟನೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಲೋಕಸಭಾ ಚುನಾವಣೆ ಎದುರಾಗುತ್ತಿದ್ದು ಜನರು ಸಂಘಪರಿವಾರ ಹಾಗೂ ಬಿಜೆಪಿಯ ಮರ್ಮವನ್ನು ಮನದಟ್ಟು ಮಾಡಿಕೊಳ್ಳಬೇಕು. ಆರ್‌ಎಸ್‌ಎಸ್ ಗುರು ಗೋಳ್ವಾಳ್ಕರ್ ಚಾತುರ್ವರ್ಣ ಸಮಾಜವೇ ದೇವರು ಎಂದಿದ್ದಾರೆ. ಅದನ್ನೇ ಸಾವರ್ಕರ್ ಹಿಂದುತ್ವ ಎನ್ನುತ್ತಾರೆ. ಕೇಂದ್ರ ಸರ್ಕಾರವೂ ಅದನ್ನೇ ಅನುಷ್ಠಾನಗೊಳಿಸಲು ಹೊರಟಿದೆ. ಬಿಜೆಪಿ ಗೆದ್ದರೆ ರೈತರು, ಶೂದ್ರರು, ದುಡಿಯುವ ಜನರೆಲ್ಲರೂ ಮೇಲಿನವರ ಕಾಲಾಳುಗಳಾಗಿ ಇರಬೇಕಾಗುವಂಥ ಅಪಾಯವಿದೆ’ ಎಂದರು.
‘ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಬಂದು ಊರನ್ನೇ ಛಿದ್ರಗೊಳಿಸಿದೆ. ದೇವರು, ಧರ್ಮ, ಧ್ವಜ, ಬಣ್ಣಗಳನ್ನು ನಿಜ ಭಕ್ತಿ ಇಲ್ಲದವರು ಹಣ ಮಾಡಲು, ಅಧಿಕಾರ ಹಿಡಿಯಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಛಿದ್ರತೆ, ಭಿನ್ನಭಾವ ಹೆಚ್ಚುತ್ತಿದ್ದು ದೆವ್ವ, ಪಿಶಾಚಿಗಳು ಪ್ರವೇಶ ಪಡೆದಂತೆ ಕಾಣುತ್ತಿದೆ. ಇದನ್ನು ಮಂಡ್ಯದಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ’ ಎಂದರು.
‘ಮಂಡ್ಯದಲ್ಲಿ ಇಂಥ ಬದಲಾವಣೆಯಾಗಲು, ಜೆಡಿಎಸ್ ಜಾತ್ಯತೀತತೆಯನ್ನು ತುಳಿದು ಆರ್‌ಎಸ್‌ಎಸ್, ಬಿಜೆಪಿಯನ್ನು ಆಲಂಗಿಸಿಕೊಂಡಿದ್ದೇ ಕಾರಣ. ಆ ಗಳಿಗೆಯಿಂದಲೇ ಜೆಡಿಎಸ್ ಜನತಾದಳ ಮಾತ್ರ, ಜಾತ್ಯತೀತವಲ್ಲ, ಆ ಪಕ್ಷದ ನೈತಿಕತೆ ಪತನವಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ ಪ್ರಧಾನಿಯಾಗಿ ನೆನಪಿನಲ್ಲುಳಿಯುವ ಕೆಲಸ ಮಾಡಿದ ಮುತ್ಸದ್ಧಿ ಎಚ್.ಡಿ.ದೇವೇಗೌಡರ ಪಕ್ಷಕ್ಕೆ ಈ ಅವನತಿ ಬರಬಾರದಿತ್ತು’ ಎಂದರು.
‘ಈಗ ಜನತಾದಳದ ಬೆನ್ನು, ತಲೆ ಮೇಲೆ ಸಂಘ ಪರಿವಾರ, ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ. ದೇವೇಗೌಡರು ಅಮಾಯಕರು. ಮಕ್ಕಳು ಮತ್ತು ಸೊಸೆಯರ ದಿಗ್ಭಂಧನಕ್ಕೆ ಒಳಗಾಗಿ, ಅಸಹಾಯಕತೆಯಿಂದ ಈ ಆಲಿಂಗನಕ್ಕೆ ಒಪ್ಪಿದ್ದಾರೆ ಎನ್ನುವ ಮಾತುಗಳಿವೆ’ ಎಂದರು.
‘ಅಪ್ರತಿಮ ದೇಶಪ್ರೇಮಿ, ಕ್ರಾಂತಿಕಾರಿ ಆಡಳಿತಗಾರ ಟಿಪ್ಪು ಸುಲ್ತಾನ್ ವಿರುದ್ಧ ಚೇಷ್ಟೆಯ ಕಟ್ಟುಕತೆಯಂತೆ ಉರಿಗೌಡ, ದೊಡ್ಡನಂಜೇಗೌಡರನ್ನು ಛೂಬಿಟ್ಟಾಗ ಅವೆಲ್ಲವೂ ನೆಗೆದು ಬಿದ್ದು ಹೋದವು. ಮುಂದೆ ಅವರು ಪಂಜು ಹಿಡಿದು ಬೆಂಕಿ ಹಚ್ಚಲು ಬಂದಾಗ ನಾವು ಮನೆಗಳಲ್ಲಿ ಸಹಬಾಳ್ವೆಯ ಹಣತೆ ಬೆಳಗಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.