ADVERTISEMENT

ದೇವೇಗೌಡ ಮಾಜಿ ಪ್ರಧಾನಿಯಲ್ಲ, ರೈತರ ಪ್ರಧಾನಿ: ಉಪರಾಷ್ಟ್ರಪತಿ ಧನಕರ್‌ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:19 IST
Last Updated 25 ಅಕ್ಟೋಬರ್ 2024, 15:19 IST
<div class="paragraphs"><p>ಎಚ್.ಡಿ. ದೇವೇಗೌಡ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌</p></div>

ಎಚ್.ಡಿ. ದೇವೇಗೌಡ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

   

ಬಿ.ಜಿ.ನಗರ (ಮಂಡ್ಯ): ‘ದೇಶದ ಜಿಡಿಪಿ (ರಾಷ್ಟ್ರೀಯ ಉತ್ಪನ್ನ) ಹೆಚ್ಚಳವಾಗಿದ್ದು, ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿ ದಾಪುಗಾಲು ಇಡುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ದೇಶದಲ್ಲಿ ಅವಕಾಶಗಳ ಬಾಗಿಲು ತೆರೆದಿದ್ದು, ಯುವಜನರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸದವಕಾಶ ದೊರೆತಿದೆ. 2047ರ ವೇಳೆಗೆ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ರಾಷ್ಟ್ರ) ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ತಿಳಿಸಿದರು.

ನಾಗಮಂಗಲ ತಾಲ್ಲೂಕಿನ ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿ.ಜಿ.ಎಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಾದ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಐವತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ಈ ವಿದ್ಯಾಸಂಸ್ಥೆಯಲ್ಲಿ ಜಾತಿ, ಧರ್ಮ ಎಂಬ ಭೇದವಿಲ್ಲದೆ ಎಲ್ಲ ಸಮುದಾಯಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಆದಿಚುಂಚನಗಿರಿ ಶ್ರೀಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ ಹಾಗೂ ದೇಶಕ್ಕೆ ಅಪಾಯ. ಇದಕ್ಕೆ ಯಾರೂ ಪ್ರಾಮುಖ್ಯತೆ ನೀಡಬಾರದು. ‘ವಸುದೈವ ಕುಟುಂಬಕಂ’ (ಜಗತ್ತು ಒಂದು ಕುಟುಂಬ) ಎಂಬ ತತ್ವದಲ್ಲಿ ಮುನ್ನಡೆಯಬೇಕು. ಈ ದೇಶಕ್ಕೆ 5 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಈ ಭಾವೈಕ್ಯದ ನಾಡಿನಲ್ಲಿ ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಯಾರೂ ಹಾಳುಮಾಡಬಾರದು ಎಂದು ಕಿವಿಮಾತು ಹೇಳಿದರು.

‘‌ಎಚ್.ಡಿ. ದೇವೇಗೌಡ ಅವರು ಕೇವಲ ಮಾಜಿ ಪ್ರಧಾನಿಯಲ್ಲ, ಅವರೊಬ್ಬ ‘ರೈತರ ಪ್ರಧಾನಿ’ ಯಾಗಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ತಂದಿದ್ದಾರೆ. ರಾಜ್ಯಸಭೆಯಲ್ಲಿದ್ದಾಗ ಸದಾ ರೈತರ ಪರ ಧ್ವನಿ ಎತ್ತುತ್ತಿದ್ದರು. ಅವರು ಭಾರತ ಮಾತೆಯ ಶ್ರೇಷ್ಠ ಸುಪುತ್ರ’ ಎಂದು ಗುಣಗಾನ ಮಾಡಿದರು.

ಮಾಹಿತಿ ವಿನಿಮಯವನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಬೇಕು. ತಾಯಿ ನೆಲ ಶ್ರೇಷ್ಠವಾಗಿದ್ದು, ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಈ ಸಂಸ್ಥೆ ಆಧುನಿಕ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಸಾರವನ್ನು ಸಾರುತ್ತಿದೆ. ಶ್ರೀಮಠ ರಾಜ್ಯದಲ್ಲಿ ಅಷ್ಟೇ ಅಲ್ಲ ವಿದೇಶವು ಸೇರಿದಂತೆ 26 ಶಾಖಾ ಮಠದ ಜೊತೆಗೆ ಬಹಳಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಅಂಧ, ಕಿವುಡ, ಹಾಗೂ ವಿಕಲಚೇತನ ಮಕ್ಕಳಿಗೆ ಶಾಲೆಗಳನ್ನು ನಡೆಸುತ್ತಿರುವುದು ಪ್ರಶಂಸನೀಯ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ...

ಗುಜರಾತ್ ರಾಜ್‌ಕೋಟ್‌ನ ಹರ್ಷ ವಿದ್ಯಾಮಂದಿರದ ಪರಮಾತ್ಮಾನಂದ ಸರಸ್ವತಿ ಜೀ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳ ಮನಗೆದ್ದರು.

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರಿಗೆ ಪೇಟ ತೊಡಿಸಿ, ‘ಮೈಸೂರು ದಸರಾ ಮೆರವಣಿಗೆಯ’ ಕಲಾಕೃತಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸನ್ಮಾನಿಸಿದರು. ಗಣ್ಯರು ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಾಲಭೈರವೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಉಪರಾಷ್ಟ್ರಪತಿಯವರ ಪತ್ನಿ ಸುದೇಶ್‌ ಧನಕರ್, ವಿಶ್ವವಿದ್ಯಾಲಯದ ಕುಲಪತಿ ಎಂ.ಎ. ಶೇಖರ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಸುಜಾತಾ ರಾಥೋಡ್‌ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಶೇಖ್‌ ತನ್ವೀರ್‌ ಆಸಿಫ್‌, ಡಿಜಿಪಿ ಬೋರಲಿಂಗಯ್ಯ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾನಂದನಾಥ ಸ್ವಾಮೀಜಿ ಅವರು ಹೆಲಿಪ್ಯಾಡ್‌ನಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ಸ್ವಾಗತಿಸಿದರು.

ಬರಡು ನೆಲದಲ್ಲಿ ವಿದ್ಯಾಲಯ ಕಟ್ಟಿದ ಶ್ರೀಗಳು...

ಐವತ್ತು ವರ್ಷಗಳ ಹಿಂದೆ ಬರಡು ನೆಲವಾಗಿದ್ದ ಚುಂಚನಗಿರಿ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ತಂದವರು ಬಾಲಗಂಗಾಧರನಾಥ ಶ್ರೀಗಳು. ಇವರಿಗೆ ‘ಭಾರತ ರತ್ನ’ ಪ್ರಶಸ್ತಿ ಸಿಗಬೇಕಿತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಅಭಿಪ್ರಾಯಪಟ್ಟರು.

ವಿದ್ಯಾಭ್ಯಾಸಕ್ಕೆ ಯಾವುದೇ ಜಾತಿ, ಬಡತನ, ಸಿರಿತನದ ಗೋಡೆ ಇಲ್ಲ. ಎಲ್ಲರಿಗೂ ಸಹ ಶಿಕ್ಷಣ ಸಿಗಬೇಕು ಎಂಬುದು ಸ್ವಾಮೀಜಿ ಅವರ ಆಶಯವಾಗಿತ್ತು. ಅವರು ಸ್ಥಾಪಿಸಿರುವ ವಿವಿಯಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡಿ, ದೇಶ– ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

‘ಮಹಾತ್ಮ ಗಾಂಧೀಜಿ ಮತ್ತು ಅನೇಕ ಸ್ವಾತಂತ್ರ‍್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟರು. ಈಗ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಘನತೆ, ಶಿಸ್ತು, ಗೌರವ ಇಲ್ಲದಂತಾಗಿದೆ. ಕೇವಲ ಕಚ್ಚಾಟ ಹೆಚ್ಚಾಗಿದೆ. ಇವರೆಲ್ಲರನ್ನೂ ನಿಯಂತ್ರಿಸುತ್ತಿರುವ ಧನಕರ್ ಅವರ ತಾಳ್ಮೆ–ಜಾಣ್ಮೆ ಮೆಚ್ಚುವಂಥದ್ದು’ ಎಂದು ಶ್ಲಾಘಿಸಿದರು.

1.66 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ...

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘20 ವರ್ಷಗಳ ಹಿಂದೆ ಇಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ವಿದ್ಯಾರ್ಥಿಗಳೊಂದಿಗೆ ‘2020 ವಿಷನ್‌’ ಬಗ್ಗೆ ಸಂವಾದ ನಡೆಸಿದ್ದರು. ಈಗ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ನಮ್ಮ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಲು ಬಂದಿರುವುದು ಅವಿಸ್ಮರಣೀಯ ಗಳಿಗೆ’ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು ಗ್ರಾಮೀಣ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಈ ವಿದ್ಯಾಸಂಸ್ಥೆಯನ್ನು ಕಟ್ಟಿದ್ದಾರೆ. ನಮ್ಮಲ್ಲಿ 500ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿದ್ದು, ಸುಮಾರು 1.66 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಈ ಎರಡೂ ಕ್ಷೇತ್ರಗಳಿಗೆ ಅವಶ್ಯವಾದ ‘ಆರ್ಟಿಫಿಶಿಯಲ್ ಇಂಟಲಿಜೆಂಟ್’ (ಕೃತಕ ಬುದ್ಧಿಮತ್ತೆ) ಕೋರ್ಸ್‌ಗೆ ಆದ್ಯತೆ ನೀಡಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.