ನಾಗಮಂಗಲ: ‘ಸಮಾಜದ ಉನ್ನತಿಗಾಗಿ ಹಗಲಿರುಳು ಶ್ರಮಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಹಲವು ಸಂಸ್ಥೆಗಳನ್ನು ಕಟ್ಟಿ ಹೋಗಿದ್ದಾರೆ. ಅವರು ಭೈರವೈಕ್ಯರಾಗುವುದಕ್ಕೆ ಮುನ್ನ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಗುರುತಿಸಿ ಶ್ರೇಷ್ಠ ಕೆಲಸ ಮಾಡಿದ್ದಾರೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಬಾಲಗಂಗಾಧರನಾಥ ಸ್ವಾಮೀಜಿಯ 79ನೇ ಜಯಂತ್ಯುತ್ಸವದ ಅಂಗವಾಗಿ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಗುರುವಾರ ನಡೆದ ಸಂತಭಕ್ತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ‘ಆದಿಚುಂಚನಗಿರಿ ಸಂಸ್ಥೆಗಳನ್ನು ನಿರ್ಮಲಾನಂದನಾಥ ಶ್ರೀಗಳು ಮತ್ತಷ್ಟು ಬಲಯುತವಾಗಿ ಮುಂದುವರಿಸುತ್ತಿದ್ದಾರೆ. ರಾಮ ಸೇತುವೆ ಕಟ್ಟುವಾಗ ವಾನರ ಸೇನೆ ನೆರವಾದಂತೆ ಸಮಾಜದ ಸದಸ್ಯರೆಲ್ಲರೂ ಕೈಜೋಡಿಸುತ್ತಿದ್ದಾರೆ. ನನ್ನ ತಂದೆ, ತಾಯಿ ಅನಕ್ಷರಸ್ಥರಾಗಿದ್ದು, ಅವರ ಆಶೀರ್ವಾದದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ದೇವರು, ಮಠ, ಮಂದಿರಗಳ ಆಶೀರ್ವಾದ ನನ್ನ ಮೇಲಿದೆ. ರೈತರೇ ನನ್ನ ಪರಿವಾರವಾಗಿದ್ದಾರೆ’ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ದೇಶದಲ್ಲಿ ಒಕ್ಕಲಿಗರ ಮಠವಿದೆ ಎಂಬ ಕೀರ್ತಿಯನ್ನು ಭಕ್ತರಿಗೆ ನೀಡಿದವರು ಬಾಲಗಂಗಾಧರನಾಥ ಸ್ವಾಮೀಜಿ. ಅವರು ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿ ಜನಪರ ಕೆಲಸ ಮಾಡಿದ್ದಾರೆ. ಶಿಕ್ಷಣ, ಅನ್ನ ದಾಸೋಹ ಮತ್ತು ಆರೋಗ್ಯ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ. ಕೆಳ ಜಾತಿಯ ಸಮುದಾಯ ಎಂದು ಕರೆಯಲ್ಪಡುತ್ತಿದ್ದ ಮಕ್ಕಳನ್ನು ಕರೆತಂದು ಸಂಸ್ಕೃತ ಪಾಠ ಪ್ರಾರಂಭಿಸಿದರು. ಜಾತ್ಯತೀತವಾಗಿ ಎಲ್ಲರನ್ನೂ ಮಠದ ಭಕ್ತರನ್ನಾಗಿ ಸ್ವೀಕರಿಸಿದರು’ ಎಂದರು.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ಸಮಾಜವು ಒಡೆದು ಹೋಗಿದ್ದ ಕಾಲದಲ್ಲಿ ಸ್ವಾಮೀಜಿ ಸಮಾಜಕ್ಕೆ ದಿಕ್ಕು ತೋರಿಸಿ ಗೌರವ ತಂದುಕೊಟ್ಟರು. ತಪಸ್ಸು ಮಾಡಿ ಅದರ ಫಲವನ್ನು ಸಮಾಜಕ್ಕೆ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದಲ್ಲಿ ಕಲಿಯಲು ಸಹಾಯಕವಾಗುವಂತೆ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಬದುಕು ನೀಡಿದರು’ ಎಂದರು.
ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಡೋದರದ ಶಿವಾನಂದ ಆಶ್ರಮದ ಪೀಠಾಧ್ಯಕ್ಷ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ಮಾದಾರ ಗುರುಪೀಠದ ಮಾದಾರಚನ್ನಯ್ಯ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಗೋಸಾಯಿ ಮಠದ ಮಂಜುನಾಥ ಭಾರತೀ ಸ್ವಾಮೀಜಿ, ಶಾಸಕ ಅಶ್ವತ್ಥ ನಾರಾಯಣ್, ಅಮೆರಿಕದ ಒಕ್ಕಲಿಗರ ಪರಿಷತ್ ಸಲಹೆಗಾರ ಅಮರನಾಥ್ ಗೌಡ, ಜೆಡಿಎಸ್ ಮುಖಂಡರಾದ ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಅನ್ನದಾನಿ ಇದ್ದರು.
ಮೋದಿಗೆ ದೀರ್ಘಾಯುಷ್ಯ ನೀಡಲಿ
‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಅವರಿಗೆ ಶ್ರೀರಾಮ ದೀರ್ಘಾಯುಷ್ಯ ನೀಡಿ ಮತ್ತಷ್ಟು ಶಕ್ತಿ ಕರುಣಿಸಲಿ. ಜ.22ರಂದು ಸ್ಥಾಪನೆಯಾಗುತ್ತಿರುವ ಶ್ರೀರಾಮಚಂದ್ರನ ಮೂರ್ತಿ ಸೂರ್ಯಚಂದ್ರರು ಇರುವವರೆಗೂ ಶಾಶ್ವತವಾಗಿ ಉಳಿಯಲಿದೆ’ ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.