ಶ್ರೀರಂಗಪಟ್ಟಣ: ಪಟ್ಟಣದ ಪ್ರಸಿದ್ಧ ಶ್ರದ್ಧಾ ಕೇಂದ್ರವಾದ ಪಶ್ಚಿಮವಾಹಿನಿ ಕ್ಷೇತ್ರವನ್ನು ಹರಿದ್ವಾರ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಕಾರ್ಯ ಕನಸಾಗಿಯೇ ಉಳಿದಿದೆ.
ಈ ತಾಣವನ್ನು ಅಭಿವೃದ್ಧಿ ಮಾಡಲು ಐದು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಮತ್ತು ಸಂಸದೆ ರಮ್ಯಾ ₹1 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿಯೂ ಆರಂಭವಾಯಿತು. ಆದರೆ ಉದ್ದೇಶಿತ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಪಿಂಡ ಪ್ರದಾನ ಇತರ ಕಾರ್ಯಗಳಿಗೆ ನದಿಯ ಮಧ್ಯೆ ಕಟ್ಟೆಗಳನ್ನು ಕಟ್ಟುವುದು, ಅಲ್ಲಿಗೆ ತಲುಪಲು ಕಿರು ಸೇತುವೆಗಳನ್ನು ನಿರ್ಮಿಸುವುದು, ಸೋಪಾನ ಕಟ್ಟೆಯನ್ನು ಅಭಿವೃದ್ದಿಪಡಿಸುವುದು, ತ್ಯಾಜ್ಯ ಸಂಗ್ರಹಕ್ಕೆ ಕಂಟೇನರ್ ಇಡುವುದು ಸೇರಿದಂತೆ ಯಾವ ಕೆಲಸವೂ ಪೂರ್ಣವಾಗಲಿಲ್ಲ. ಅಸ್ತಿ ವಿಸರ್ಜನೆ, ಪಿಂಡ ಪ್ರದಾನ, ತಿಲ ತರ್ಪಣ ಇತರ ಕಾರ್ಯಗಳಿಗೆ ಬರುವವರು ಇಲ್ಲಿನ ಅವ್ಯವಸ್ಥೆಗೆ ಮೂಗು ಮುರಿಯುತ್ತಿದ್ದಾರೆ.
ಪಶ್ಚಿಮವಾಹಿನಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು 1948ರಲ್ಲಿ ವಿಸರ್ಜನೆ ಮಾಡಲಾಗಿದೆ. ಅಂದಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರೇ ಬಂದು ಗಾಂಧೀಜಿ ಅವರ ಅಸ್ತಿಯನ್ನು ವಿಸರ್ಜನೆ ಮಾಡಿ ಹೋಗಿದ್ದಾರೆ. ಅದರ ಕುರುಹಾಗಿ ಸ್ಮಾರಕವನ್ನೂ ಸ್ಥಾಪಿಸಲಾಗಿದೆ. ಈ ಸ್ಮಾರಕದ ಆವರಣದಲ್ಲೇ ಪಿಂಡ ಪ್ರದಾನ, ಹೋಮ, ಹವನನಾದಿಗಳು ನಡೆಯುತ್ತವೆ. ಸ್ಮಾರಕ ಮೇಲೆ ಬಟ್ಟೆಗಳನ್ನು ಒಣಗಲು ಹಾಕುತ್ತಿರುವುದು ವಿಪರ್ಯಾಸದ ಸಂಗತಿ.
‘ಪಶ್ಚಿಮವಾಹಿನಿ ಕ್ಷೇತ್ರದಲ್ಲಿ ಅಸ್ತಿ ವಿಸರ್ಜನೆ, ಪಿಂಡ ಪ್ರದಾನ ಮಾಡಿದರೆ ಒಳ್ಳೆಯದು ಎಂಬ ಕಾರಣಕ್ಕೆ ಪ್ರತಿ ದಿನ ನೂರಾರು ಮಂದಿ ಇಲ್ಲಿಗೆ ಬರುತ್ತಾರೆ. ಇಂತಹ ಕಾರ್ಯ ನಡೆಸುವವರಿಂದ ಸ್ಥಳೀಯ ಪುರಸಭೆ ತಲಾ ₹100 ಶುಲ್ಕ ವಸೂಲಿ ಮಾಡುತ್ತದೆ. ಆದರೆ ಇಲ್ಲಿ ಕುಡಿಯಲು ನೀರೇ ಇಲ್ಲ. ನದಿಯ ಒಳಗೆ ಮತ್ತು ದಡದಲ್ಲಿ ತ್ಯಾಜ್ಯ ಚೆಲ್ಲಾಡುತ್ತಿದೆ’ ಎಂದು ಬೆಂಗಳೂರಿನ ಅಶ್ವತ್ಥಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.
‘ಪಶ್ಚಿಮ ವಾಹಿನಿ ಕ್ಷೇತ್ರದ ಅಭಿವೃದ್ಧಿಗೆ ಏಳೆಂಟು ವರ್ಷಗಳ ಹಿಂದೆ ಸಂಸದರ ನಿಧಿಯಿಂದ ₹1 ಕೋಟಿ ಇನ್ನೋವೇಟಿವ್ ಫಂಡ್ ಬಂದಿತ್ತು. ಕಾರಣಾಂತರಗಳಿಂದ ಕೆಲಸ ಅರ್ಧಕ್ಕೆ ಸ್ಥಗಿತವಾಗಿದೆ. ಉಳಿದಿದ್ದ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಈ ತಾಣಕ್ಕೆ ಕಾಯಕಲ್ಪ ನೀಡುವ ಸಂಬಂಧ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಜತೆ ಚರ್ಚಿಸಿದ್ದೇನೆ. ಅನುದಾನದ ಲಭ್ಯತೆ ನೋಡಿಕೊಂಡು ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂಬುದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ತಿಳಿಸಿದರು.
‘ನಮ್ಮ ವಾರ್ಡ್ ವ್ಯಾಪ್ತಿಯಲ್ಲಿರುವ ಪಶ್ಚಿಮವಾಹಿನಿಯಲ್ಲಿ ಅಸ್ತಿ ವಿಸರ್ಜನೆ, ಪಿಂಡ ಪ್ರದಾನ ಇತರ ಕೈಂಕರ್ಯಗಳಿಗೆ ದೇಶದ ವಿವಿಧೆಡೆಗಳಿಂದ ಜನರು ಬರುತ್ತಾರೆ. ಹಾಗೆ ಬರುವವರ ಅನುಕೂಲಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ಪುರಸಭೆಯಲ್ಲಿ ಹಲವು ತಿಂಗಳುಗಳಿಂದ ಆಡಳಿತ ಮಂಡಳಿ ಅಸ್ಥಿತ್ವದಲ್ಲಿ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ಈ ತಾಣದ ಅಭಿವೃದ್ಧಿ ಸಂಬಂಧ ಶಾಸಕ ಹಾಗೂ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದು ಪುರಸಭೆಯ 5ನೇ ವಾರ್ಡ್ ಸದಸ್ಯ ಎಂ. ನಂದೀಶ್ ಹೇಳಿದ್ದಾರೆ.
5 ವರ್ಷಗಳ ಹಿಂದೆ ₹ 1ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ಅನುದಾನದ ಲಭ್ಯತೆ ನೋಡಿಕೊಂಡು ಯೋಜನೆ: ಮುಖ್ಯಾಧಿಕಾರಿ ಅಸ್ತಿ ವಿಸರ್ಜನೆ, ಪಿಂಡ ಪ್ರದಾನ ಕೈಂಕರ್ಯಗಳಿಗೆ ವಿವಿಧೆಡೆಯಿಂದ ಬರುವ ಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.