ADVERTISEMENT

ಮಿಮ್ಸ್‌ ರೋಗಿಗಳಿಗೆ ಬೂಸ್ಟ್‌ ಬಂದ ಬ್ರೆಡ್‌ ವಿತರಣೆ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 13:26 IST
Last Updated 22 ಅಕ್ಟೋಬರ್ 2024, 13:26 IST
   

ಮಂಡ್ಯ: ಇಲ್ಲಿಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ಮತ್ತು ಬೂಸ್ಟ್‌ ಬಂದ ಬ್ರೆಡ್‌ ನೀಡುತ್ತಿದ್ದುದನ್ನು ಕಂಡ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅವರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಹಾರ ಆಯೋಗದ ತಂಡ ಮಂಗಳವಾರ ಭೇಟಿ ನೀಡಿದ ಸಂದರ್ಭ, ಅಡುಗೆ ಕೋಣೆಯಲ್ಲಿ 538 ರೋಗಿಗಳಿಗೆ ಅಗತ್ಯವಿದ್ದಷ್ಟು ಆಹಾರವನ್ನು ತಯಾರಿಸಿರಲಿಲ್ಲ. ಜತೆಗೆ ಗುಣಮಟ್ಟದ ಆಹಾರ ಸಾಮಗ್ರಿ ಮತ್ತು ತರಕಾರಿಯ ದಾಸ್ತಾನು ಕೂಡ ಇರಲಿಲ್ಲ. ಅವಧಿ ಮೀರಿದ ಬ್ರೆಡ್‌ ಅನ್ನು ಇಡಲಾಗಿತ್ತು. ಈ ಅವ್ಯವಸ್ಥೆ ಕಂಡು ಡಾ.ಕೃಷ್ಣ ಅವರು ಕೆಂಡಾಮಂಡಲರಾದರು.

‘ಇಲ್ಲಿ ಕೊಡುವ ಆಹಾರ ಸ್ವಲ್ಪವೂ ರುಚಿಯಾಗಿ ಇರುವುದಿಲ್ಲ. ಹಾಲಿನಲ್ಲಿ ಸ್ವಲ್ಪವೂ ಸತ್ವವಿಲ್ಲ’ ಎಂದು ರೋಗಿಗಳು ದೂರಿದರು. ಮತ್ತೆ ಕೆಲವರು ‘ನಮಗೆ ಇಲ್ಲಿ ಉಚಿತವಾಗಿ ಆಹಾರ ಕೊಡುವ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿ ಹೊರಗಡೆ ಕ್ಯಾಂಟೀನ್‌ನಲ್ಲಿ ಹಣ ಕೊಟ್ಟು ತಿಂಡಿ–ಊಟ ತರುತ್ತಿದ್ದೇವೆ’ ಎಂದು ಸಮಸ್ಯೆ ತೋಡಿಕೊಂಡರು.

ADVERTISEMENT

ಡಾ.ಕೃಷ್ಣ ಮಾತನಾಡಿ, ‘ಜಿಲ್ಲಾಸ್ಪತ್ರೆಯ ವಾರ್ಡ್‌ಗಳಲ್ಲಿ ಶುಚಿತ್ವ ಇಲ್ಲ. ಶೌಚಾಲಯಗಳು ಗಬ್ಬು ನಾರುತ್ತಿವೆ. ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳು ಮಲಗಿದ್ದಾರೆ. ರೋಗಿಗಳಿಗೆ ಅಗತ್ಯವಾದಷ್ಟು ಆಹಾರ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ: ಐವರ ಅಮಾನತು

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಸುತ್ತಿದ್ದ ಆರೋಪದ ಮೇರೆಗೆ, ಮಂಡ್ಯ ತಾಲ್ಲೂಕಿನ ಹಳೇಬೂದನೂರು ಗ್ರಾಮದ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ (ಮಂಡ್ಯ ಮತ್ತು ದುದ್ದ ಎಂ.ಎಸ್‌.ಪಿ.ಸಿ.) ಐವರು ಸಿಬ್ಬಂದಿಯನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅವರ ಸೂಚನೆ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತುಗೊಳಿಸಿದ್ದಾರೆ.

ಸುಧಾ ಜಿ.ಎಲ್‌. (ಕಾರ್ಯದರ್ಶಿ), ಕಾಳಮ್ಮ (ಅಧ್ಯಕ್ಷೆ) ಹಾಗೂ ಅಂಬಿಕಾ ಡಿ, ನಯನಾ ಕೆ.ಟಿ., ಕಾವ್ಯಾ ಕೆ.ಸಿ (ಮೂವರು ಸದಸ್ಯರು) ಅಮಾನತುಗೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.